ಕ್ರೀಡೆ

ಮ್ಯಾಥ್ಯೂಸ್ ವಿರುದ್ಧ​ ಟೈಮ್ಡ್​ ಔಟ್​ ನೀಡಿದ ಅಂಪೈರ್​ ನಿರ್ಧಾರ ಸರಿ ಎಂದ ಎಂಸಿಸಿ; ಹೀಗಿದೆ ಕಾರಣ...

ಲಂಡನ್​: ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ ಶ್ರೀಲಂಕಾ ಆಟಗಾರ ಏಂಜೆಲೊ ಮ್ಯಾಥ್ಯೂಸ್​ ವಿರುದ್ಧ ಟೈಮ್ಡ್​ ಔಟ್​ ತೀರ್ಪು ನೀಡಿದ ಅಂಪೈರ್​ಗಳ ನಿರ್ಧಾರ ಸರಿಯಾಗಿಯೇ ಇದೆ ಎಂದು ಕ್ರಿಕೆಟ್​ ನಿಯಮಾವಳಿಗಳ ಮಹಾಪೋಷಕ ಮೆರಿಲ್​ಬೋನ್​ ಕ್ರಿಕೆಟ್​ ಕ್ಲಬ್​ (ಎಂಸಿಸಿ) ಅನುಮೋದಿಸಿದೆ. ಆದರೆ, ಹೆಲ್ಮೆಟ್​ ಬದಲಾಯಿಸುವ ಮುನ್ನ ಮ್ಯಾಥ್ಯೂಸ್​ ಅಂಪೈರ್​ಗಳ ಅನುಮತಿ ಕೇಳಿದ್ದರೆ ಔಟಾಗುವುದರಿಂದ ಬಚಾವ್​ ಆಗಬಹುದಾಗಿತ್ತು ಎಂದೂ ತಿಳಿಸಿದೆ.

ಮ್ಯಾಥ್ಯೂಸ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೈಮ್ಡ್​ ಔಟ್​ ಮೂಲಕ ಔಟಾದ ಮೊದಲ ಬ್ಯಾಟರ್​ ಎನಿಸಿದ್ದರು. ಸಧೀರ ಸಮರವಿಕ್ರಮ ಔಟಾದ ಬಳಿಕ ಕ್ರೀಸ್​ಗೆ ಬಂದು ಮುಂದಿನ ಎಸೆತ ಎದುರಿಸಲು 2 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ಕಾರಣ, ನಿಯಮಾವಳಿ ಪ್ರಕಾರ ಅವರು ಔಟಾಗಿದ್ದರು. ಸಕಾಲಕ್ಕೆ ಕ್ರೀಸ್​ಗೆ ಬಂದರೂ, ಹೆಲ್ಮೆಟ್​ ತೊಡುವ ವೇಳೆ ಅದರ ಪಟ್ಟಿ ಮುರಿದ ಕಾರಣ ಅದನ್ನು ಬದಲಾಯಿಸುವ ವೇಳೆ ಹೆಚ್ಚಿನ ಸಮಯ ತೆಗೆದುಕೊಂಡಿದ್ದರು. ಆದರೆ ಈ ವೇಳೆ ಮತ್ತು ಪಂದ್ಯದ ನಂತರ ಬಾಂಗ್ಲಾ ನಾಯಕ ಶಕೀಬ್​ ಅಲ್​ ಹಸನ್​ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

"ಹೆಲ್ಮೆಟ್​ ಸ್ಟ್ರಾಪ್​ ಮುರಿದ ವೇಳೆ ಅದನ್ನು ಬದಲಾಯಿಸಿಕೊಳ್ಳುವ ಮುನ್ನ ಮ್ಯಾಥ್ಯೂಸ್​ ಅಂಪೈರ್ಸ್​ ಒಪ್ಪಿಗೆ ಪಡೆದುಕೊಳ್ಳಲಿಲ್ಲ. ಡ್ರೆಸ್ಸಿಂಗ್​ ರೂಂನತ್ತ ಕೈಸನ್ನೆ ಮಾಡಿ ತಾವೇ ಹೊಸ ಹೆಲ್ಮೆಟ್​ ತರಿಸಿಕೊಂಡರು. ಆದರೆ ಕ್ರಿಕೆಟ್​ ನಿಯಮಾವಳಿ ಪ್ರಕಾರ, ಹೊಸ ಪರಿಕರ ತೆಗೆದುಕೊಳ್ಳುವಾಗ ಅಂಪೈರ್​ ಅನುಮತಿ ಪಡೆದುಕೊಳ್ಳುವುದು ಕೂಡ ಅಗತ್ಯವಾಗಿದೆ. ಅಂಪೈರ್​ ಬಳಿ ಕೇಳಿದ್ದರೆ ಅವರು ಅನುಮತಿ ನೀಡುತ್ತಿದ್ದರು. ಆಗ ಟೈಮ್ಡ್​ ಔಟ್​ ತೀರ್ಪು ನೀಡಲು ಅವಕಾಶ ಇರುತ್ತಿರಲಿಲ್ಲ. ಆದರೆ ಮ್ಯಾಥ್ಯೂಸ್​ ಮುಂಚಿತವಾಗಿ ಒಪ್ಪಿಗೆ ಪಡೆದಿರದ ಕಾರಣ, ಆ ಸಂದರ್ಭದಲ್ಲಿ ಟೈಮ್ಡ್​ ಔಟ್​ ಹೊರತಾಗಿ ಬೇರೆ ತೀರ್ಪು ನೀಡಲು ಕ್ರಿಕೆಟ್​ ನಿಯಮಾವಳಿ ಪ್ರಕಾರ ಅವಕಾಶವಿರಲಿಲ್ಲ' ಎಂದು ಎಂಸಿಸಿ ವಿವರಿಸಿದೆ. ದಣ ಆಫ್ರಿಕಾದ ಮರಾಯಿಸ್​ ಎರಾಸ್ಮಸ್​ ಮತ್ತು ಇಂಗ್ಲೆಂಡ್​ನ ರಿಚರ್ಡ್​ ಎಲ್ಲಿಂಗ್​ವರ್ತ್​ ಆ ಸಮಯದಲ್ಲಿ ಮೈದಾನದಲ್ಲಿದ್ದ ಅಂಪೈರ್​ಗಳು. ಟೈಮ್ಡ್​ ಔಟ್​ ವಿವಾದದಿಂದಾಗಿ ಪಂದ್ಯದ ಬಳಿಕ ಲಂಕಾ ಆಟಗಾರರು ಬಾಂಗ್ಲಾ ಆಟಗಾರರಿಗೆ ಶೇಕ್​ಹ್ಯಾಂಡ್​ ನೀಡಲು ಕೂಡ ನಿರಾಕರಿಸಿದ್ದರು.

ಟೈಮ್ಡ್​ ಔಟ್​ಗೆ ಮನವಿ ಸಲ್ಲಿಸಿದ ಬಗ್ಗೆ ನನಗೆ ಯಾವುದೇ ವಿಷಾದ ಇಲ್ಲ ಎಂದು ಶಕೀಬ್​ ಪಂದ್ಯದ ಬಳಿಕವೂ ಹೇಳಿದ್ದರೆ, ಮ್ಯಾಥ್ಯೂಸ್​ ಕಿಡಿಕಾರಿದ್ದರು. ಆದರೆ ಬ್ಯಾಟರ್​ ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಇಂಥ ನಿಯಮದ ಅಗತ್ಯವಿದೆ. ಬ್ಯಾಟರ್​ ಉದ್ದೇಶ ಸಮಯ ವ್ಯರ್ಥಗೊಳಿಸುವುದು ಆಗಿರದಿದ್ದರೂ, ಪಂದ್ಯ ತಡವಾಗುವುದನ್ನು ತಡೆಯಲು ಇಂಥ ನಿಯಮ ಬೇಕಾಗಿದೆ ಎಂದು ಎಂಸಿಸಿ ಸಮರ್ಥಿಸಿಕೊಂಡಿದೆ.