ಕ್ರೀಡೆ

ಕಾರು ಅಪಘಾತದಲ್ಲಿ ಗಾಯಗೊಂಡ ಪಾಕಿಸ್ತಾನದ ಇಬ್ಬರು ಮಹಿಳಾ ಕ್ರಿಕೆಟಿಗರ ಸ್ಥಿತಿ ಗಂಭೀರ!

ಇಸ್ಲಮಾಬಾದ್​: ಪಾಕಿಸ್ತಾನದ ಮಹಿಳಾ ಕ್ರಿಕೆಟಿಗರಿಬ್ಬರು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಮಾಜಿ ನಾಯಕಿ ಬಿಸ್ಮಾ ಮರೂಫ್ ಮತ್ತು ಲೆಗ್ ಸ್ಪಿನ್ನರ್ ಗುಲಾಮ್ ಫಾತಿಮಾ ಗಾಯಗೊಂಡ ಕ್ರಿಕೆಟಿಗರು.

ಅಪಘಾತವಾದ ತಕ್ಷಣ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಇಬ್ಬರು ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಇಬ್ಬರಿಗೂ ಸಂಪೂರ್ಣ ವೈದ್ಯಕೀಯ ಸೇವೆಗಳನ್ನು ಒದಗಿಸುವುದಾಗಿಯೂ ಪಿಸಿಬಿ ಪ್ರಕಟಿಸಿದೆ.

ಬಿಸ್ಮಾ ಮರೂಫ್ ಮತ್ತು ಗುಲಾಮ್ ಫಾತಿಮಾ ಇಬ್ಬರೂ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಸದ್ಯ ಇವರಿಬ್ಬರು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದರು. ಅಷ್ಟರಲ್ಲೇ ಅಪಘಾತಕ್ಕೀಡಾಗಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ನಡುವಿನ ಸರಣಿ ಏಪ್ರಿಲ್ 18 ರಿಂದ ಪ್ರಾರಂಭವಾಗಲಿದ್ದು, ಅಷ್ಟರಲ್ಲಿ ಈ ಇಬ್ಬರು ಕ್ರಿಕೆಟಿಗರು ಚೇತರಿಸಿಕೊಳ್ಳುತ್ತಾರೆಯೇ ಎಂಬುದನ್ನು ವೈದ್ಯಕೀಯ ತಂಡ ನಿರ್ಧರಿಸುತ್ತದೆ. (ಏಜೆನ್ಸೀಸ್​)