ಕ್ರೀಡೆ

ಟಿ20 ವಿಶ್ವಕಪ್​ ಮುಗಿದ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಇಬ್ಬರು ಹಿರಿಯ ಐಸಿಸಿ ಅಧಿಕಾರಿಗಳು!

ನವದೆಹಲಿ: ಅಮೆರಿಕಾ ಮತ್ತು ವೆಸ್ಟ್​​ ಇಂಡೀಸ್​ ಸಹ ಅತಿಥ್ಯ ವಹಿಸಿಕೊಂಡಿದ್ದ ಟಿ20 ವಿಶ್ವಕಪ್​ 2024ರ ಟೂರ್ನಿ ಇತ್ತೀಚೆಗಷ್ಟೇ ಬಾರ್ಬಡೋಸ್​ನಲ್ಲಿ ಅಂತ್ಯಗೊಂಡಿದ್ದು, ಟೀಮ್ ಇಂಡಿಯಾದ ಗೆಲುವಿನ ಮೂಲಕ ಯಶಸ್ವಿ ಮುಕ್ತಾಯ ಪಡೆಯಿತು. ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯನ್ನು ವಿದೇಶದಲ್ಲಿ ಆಯೋಜನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಬ್ಬರು ಐಸಿಸಿ ಅಧಿಕಾರಿಗಳು ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದು, ಅನೇಕರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಟಿ20 ವಿಶ್ವಕಪ್ ಆಯೋಜನೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಹಿರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕಾರಿಗಳು ರಾಜೀನಾಮೆ ಕೊಟ್ಟಿರುವುದು ಕೆಲವರಲ್ಲಿ ಗೊಂದಲ ಸೃಷ್ಟಿಸಿದ್ದು, ಇದರ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಅಥವಾ ಬಲವಾದ ಕಾರಣವಿರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ, ಅಸಲಿಗೆ ಈ ಇಬ್ಬರು ಹಿರಿಯ ಅಧಿಕಾರಿಗಳ ರಾಜೀನಾಮೆ ಬಹಳ ದಿನಗಳ ಹಿಂದೆಯೇ ಧೃಡವಾಗಿತ್ತು ಎಂದು ಐಸಿಸಿ ತಿಳಿಸಿದೆ.

ಐಸಿಸಿಯ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಮತ್ತು ಮಾರ್ಕೆಟಿಂಗ್ ಹಾಗೂ ಸಂವಹನಗಳ ಜನರಲ್ ಮ್ಯಾನೇಜರ್ ಆಗಿದ್ದ ಕ್ಲೇರ್ ಫರ್ಲಾಂಗ್ ಅವರು ಶ್ರೀಲಂಕಾದ ಕೊಲಂಬೊದಲ್ಲಿ ಐಸಿಸಿಯ ವಾರ್ಷಿಕ ಸಮ್ಮೇಳನ ನಡೆಯುವ ಮುನ್ನವೇ ಸಂಸ್ಥೆಯದಿಂದ ಹೊರನಡೆದಿದ್ದಾರೆ. ಮೂಲಗಳ ಪ್ರಕಾರ, ಈ ಟಿ20 ವಿಶ್ವಕಪ್ 2024ರ ಟೂರ್ನಿಗೂ ಅವರ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಹಲವು ತಿಂಗಳ ಹಿಂದೆಯೇ ಅವರಿಬ್ಬರು ತಮ್ಮ ರಾಜೀನಾಮೆ ನೀಡಿದ್ದರು. ಆದಾಗ್ಯೂ, ಅಮೆರಿಕಾದಲ್ಲಿ ಆಯೋಜಿಸಲಾಗಿದ್ದ ವಿಶ್ವಕಪ್ ಪಂದ್ಯಗಳನ್ನು ಯಶಸ್ವಿಯಾಗಿ ಮುಗಿಸುವವರೆಗೂ ಕಾದಿದ್ದರು ಎಂದು ಹೇಳಲಾಗಿದೆ.

ವಾರ್ಷಿಕ ಸಮ್ಮೇಳನದಲ್ಲಿ ಟೆಟ್ಲಿ ಮತ್ತು ಫರ್ಲಾಂಗ್ ಭಾಗವಹಿಸಲಿದ್ದು, ಸಮ್ಮೇಳನವು ಇದೇ ಜುಲೈ 19ರಿಂದ 22ರವರೆಗೆ ನಡೆಯಲಿದೆ ಎಂದು ವರದಿ ಉಲ್ಲೇಖಿಸಿದೆ. ಒಂದೆಡೆ ಈ ರೀತಿಯ ಸುದ್ದಿ ಕೇಳಿಬಂದರೆ, ಮತ್ತೊಂದೆಡೆ, ವಿಶ್ವಕಪ್​ ಪಂದ್ಯಕ್ಕಾಗಿ ಅಮೆರಿಕಾದಲ್ಲಿ ಆಯೋಜನೆ ಮಾಡಲು ತಗುಲಿದ ವೆಚ್ಚಗಳು ಈ ಹಿಂದೆ ಮಾಡಲಾಗಿದ್ದ ಲೆಕ್ಕಾಚಾರಕ್ಕಿಂತ ಹೆಚ್ಚಿದೆ. ಇದು ಬಜೆಟ್‌ ಗಾತ್ರವನ್ನು ಮೀರಲು ಕಾರಣವೇನು? ಎಂಬ ವಿಚಾರಗಳಿಂದ ಐಸಿಸಿ ಕೆರಳಿರಬಹುದು. ಇದನ್ನು ಪ್ರಶ್ನಿಸಿದ ಕಾರಣಕ್ಕೆ ಟೆಟ್ಲಿ ಮತ್ತು ಫರ್ಲಾಂಗ್​ ರಾಜೀನಾಮೆ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ,(ಏಜೆನ್ಸೀಸ್).