ಕ್ರೀಡೆ

ಟೀಮ್ ಇಂಡಿಯಾದ ಈತ ವಿಶ್ವ ಶ್ರೇಷ್ಠ ಕ್ರಿಕೆಟಿಗ! ನನ್ನ ಮೊಮ್ಮಕ್ಕಳ ಬಳಿಯೂ ಹೆಮ್ಮೆಯಿಂದ ಹೇಳ್ತೀನಿ ಎಂದ ಹೆಡ್ | ​Travis Head

​Travis Head : ಆಸ್ಟ್ರೇಲಿಯಾದ ಸ್ಟಾರ್​ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಟೀಮ್ ಇಂಡಿಯಾದ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಮನಸಾರೆ ಹೊಗಳಿದ್ದಾರೆ. ಬುಮ್ರಾ ಅವರನ್ನು ವಿಶ್ವದ ಅತ್ಯುತ್ತಮ ಮತ್ತು ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎಂದು ಕರೆಯಲಾಗುತ್ತದೆ. ಅಂತಹ ವೇಗಿಯ ಬೌಲಿಂಗ್‌ನಲ್ಲಿ ಆಡುವುದು ನನಗೆ ಗೌರವವಾಗಿದೆ ಎಂದು ಹೆಡ್​ ಹೇಳಿದ್ದಾರೆ.

ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲು ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿರುವುದು ಗೊತ್ತೇ ಇದೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್ ಕ್ರೀಡಾಂಗಣದಲ್ಲಿ ಕೆಲವು ದಿನಗಳ ಹಿಂದೆ ನಡೆಯಿತು. ಈ ಪಂದ್ಯದಲ್ಲಿ ಬುಮ್ರಾ ನಾಯಕತ್ವದಲ್ಲಿ ಟೀಮ್​ ಇಂಡಿಯಾ 295 ರನ್‌ಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಕಾಂಗರೂ ನೆಲದಲ್ಲಿ ದಾಖಲಿಸಿದ ಅತಿ ದೊಡ್ಡ ಗೆಲುವು ಇದಾಗಿದೆ.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ನಾಯಕ ಮತ್ತು ಬೌಲರ್‌ ಆಗಿ ಬುಮ್ರಾ ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಬುಮ್ರಾ ಅವರು ಒಟ್ಟು ಎಂಟು ವಿಕೆಟ್ ಪಡೆದು ಆಸೀಸ್ ಬ್ಯಾಟಿಂಗ್ ಕ್ರಮಾಂಕವನ್ನೇ ನಾಶಪಡಿಸಿದರು. ಟೀಮ್​​ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಆಸ್ಟ್ರೇಲಿಯಾದ ಟೆಸ್ಟ್​ ಕ್ರಿಕೆಟ್​ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಟ್ರಾವಿಸ್ ಹೆಡ್ ಅವರು ಬುಮ್ರಾ ಅವರಂತಹ ಶ್ರೇಷ್ಠ ಬೌಲರ್ ಅನ್ನು ಎದುರಿಸಿದ್ದಾರೆ. ಇದೀಗ ಅವರ ಬೌಲಿಂಗ್​ ಕೌಶಲ್ಯವನ್ನು ಮನಸಾರೆ ಶ್ಲಾಘಿಸಿದ್ದಾರೆ. ನಮ್ಮ ವೃತ್ತಿಜೀವನ ಮುಗಿದ ನಂತರ ಒಮ್ಮೆ ಹಿಂತಿರುಗಿ ನೋಡಿದಾಗ ನಮ್ಮ ಮೊಮ್ಮಕ್ಕಳಿಗೆ ನಾವು ಬುಮ್ರಾ ಅವರಂತಹ ಶ್ರೇಷ್ಠ ಬೌಲರ್ ಅನ್ನು ಎದುರಿಸಿದೆವು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಆಸಿಸ್​ ಮಾಧ್ಯಮಗಳಿಗೆ ತಿಳಿಸಿದರು.

ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್ ಗಳಿಸಿದ ಹೆಡ್​, ಭಾರತದ ಚೊಚ್ಚಲ ವೇಗಿ ಹರ್ಷಿತ್ ರಾಣ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 89 ರನ್ ಗಳಿಸಿ ಆಸೀಸ್‌ನ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇದೇ ಇನ್ನಿಂಗ್ಸ್​ನಲ್ಲಿ ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ರಿಷಬ್ ಪಂತ್‌ಗೆ ಕ್ಯಾಚ್ ನೀಡಿ ಪೆವಲಿಯನ್​ಗೆ ಮರಳಿದರು.

ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಡಿಲೇಡ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಡಿಸೆಂಬರ್ 6 ರಿಂದ 10ರವರೆಗೆ ಪಿಂಕ್ ಬಾಲ್‌ನೊಂದಿಗೆ ನಡೆಸಲು ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮೊದಲ ಟೆಸ್ಟ್ ನಾಲ್ಕೇ ದಿನದಲ್ಲಿ ಮುಗಿದಿದ್ದು, ಎರಡನೇ ಟೆಸ್ಟ್ ಎಷ್ಟು ದಿನ ನಡೆಯಲಿದೆ ಎಂಬ ಚರ್ಚೆ ಕ್ರೀಡಾ ವಲಯದಲ್ಲಿ ಸದ್ಯ ನಡೆಯುತ್ತಿದೆ. ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್‌ನಿಂದ ದೂರ ಉಳಿದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಎರಡನೇ ಪಂದ್ಯಕ್ಕೆ ಲಭ್ಯವಾಗಿದ್ದಾರೆ. ಇದರೊಂದಿಗೆ ರೋಹಿತ್ ನಾಯಕತ್ವದಲ್ಲಿ ಬುಮ್ರಾ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. (ಏಜೆನ್ಸೀಸ್​)