ಬೆಂಗಳೂರು: ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ಲಾಕ್ಡೌನ್ ಎಂಬ ಮಹಾ ಅಸ್ತ್ರವನ್ನೇ ಬಳಸಿದೆ. ಜತೆಗೆ ರಾಜ್ಯ ಸರ್ಕಾರ ಕೂಡ ಹಲವು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಇದೀಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಇಎಸ್) ಮತ್ತೊಂದು ಹೆಜ್ಜೆ ಮುಂದೆ ಹೋಗಿ, ‘ನಮ್ಮ ಮನೆ ನನ್ನ ಸುರಕ್ಷೆ’ ಎಂಬ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.
ಶುಕ್ರವಾರ ಬೆಳಗ್ಗೆ 11ರಿಂದ 12 ಗಂಟೆವರೆಗೆ ಕೋವಿಡ್-19 ಕುರಿತು ರಾಜ್ಯದ ಹಾಲಿ ಹಾಗೂ ಮಾಜಿ ಕ್ರೀಡಾತಾರೆಯರು ಹಾಗೂ ಸಿನಿಮಾ ತಾರೆಯರೊಂದಿಗೆ ಕ್ರೀಡಾ ಸಚಿವ ಸಿ.ಟಿ. ರವಿ, ಸಾಮಾಜಿಕ ಜಾಲತಾಣಗಳ ಮೂಲಕ ಸಂವಾದ ನಡೆಸಲಿದ್ದಾರೆ.
ಕೈ ಜೋಡಿಸುತ್ತಿರುವ ಸ್ಟಾರ್ಗಳು: ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಸ್ನೂಕರ್ ಪಟು ಪಂಕಜ್ ಆಡ್ವಾಣಿ, ಷಟ್ಲರ್ ಅಶ್ವಿನಿ ಪೊನ್ನಪ್ಪ, ಕ್ರಿಕೆಟಿಗ ರಾಬಿನ್ ಉತ್ತಪ್ಪ, ಮಾಜಿ ಅಥ್ಲೀಟ್ಗಳಾದ ಅಶ್ವಿನಿ ನಾಚಪ್ಪ ಹಾಗೂ ರೀತ್ ಅಬ್ರಾಹಂ ಸೇರಿದಂತೆ 26 ಕ್ರೀಡಾತಾರೆಯರು ವಿಡಿಯೋ ಕಾನ್ಪೆರೆನ್ಸ್ ಮೂಲಕ ಮಹಾಮಾರಿ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಚಿತ್ರರಂಗದಿಂದ ಪುನೀತ್ ರಾಜ್ಕುಮಾರ್, ನೇಹಾ ಶೆಟ್ಟಿ, ರಾಗಿಣಿ ದ್ವಿವೇದಿ, ಐಂದ್ರಿತಾ ರೇ, ದಿಗಂತ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈ ಕುರಿತು ವಿಜಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡ ಡಿವೈಇಎಸ್ ಆಯುಕ್ತ ಕೆ. ಶ್ರೀನಿವಾಸ್, ನಮ್ಮ ಕಾರ್ಯಕ್ರಮದ ಮೂಲ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವುದು. ಸರ್ಕಾರದ ಕ್ರಮಗಳನ್ನು ಪಾಲಿಸಲು ಜನರನ್ನು ಪ್ರೇರೇಪಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಕ್ರೀಡಾಪಟುಗಳು, ಸಿನಿಮಾ ನಟರು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಿದೆ ಎಂದರು. ಬಿಬಿಎಂಪಿ ವಾರ್ ರೂಂನಲ್ಲಿ ಜೂಮ್ ಆಪ್ ಮೂಲಕ ಪ್ರತಿಯೊಬ್ಬರನ್ನು ಸಂರ್ಪಸಿ, ಬಳಿಕ ಫೇಸ್ಬುಕ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ನೇರಪ್ರಸಾರ ಕಾಣಲಿದೆ.