ಕ್ರೀಡೆ

ಉಪಾಂತ್ಯ ಸ್ಥಾನ ಅಧಿಕೃತಕ್ಕೆ ಇಂದು ದಕ್ಷಿಣ ಆಫ್ರಿಕಾ ಹೋರಾಟ; ಹೀಗಿದೆ ಸೆಮಿಫೈನಲ್​ ಲೆಕ್ಕಾಚಾರ...

ಕರಾಚಿ: ಸೆಮಿಫೈನಲ್​ ಪ್ರವೇಶಿಸುವ ಸನಿಹದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಈಗಾಗಲೆ ಸೆಮಿಫೈನಲ್​ ರೇಸ್​ನಿಂದ ಹೊರಬಿದ್ದಿರುವ ಇಂಗ್ಲೆಂಡ್​ ತಂಡಗಳು ಐಸಿಸಿ ಚಾಂಪಿಯನ್ಸ್​ ಟ್ರೋಫಿ 9ನೇ ಆವೃತ್ತಿಯಲ್ಲಿ ಶನಿವಾರ ಮುಖಾಮುಖಿ ಆಗಲಿವೆ. ಬಿ ಗುಂಪಿನ ಈ ಕೊನೇ ಲೀಗ್​ ಪಂದ್ಯದಲ್ಲಿ ಗುಂಪಿನ ಅಗ್ರಸ್ಥಾನಿಯ ನಿರ್ಧಾರವೂ ಆಗಲಿದೆ.

ಎ ಗುಂಪಿನಲ್ಲಿ ಭಾರತ, ನ್ಯೂಜಿಲೆಂಡ್​ ತಂಡಗಳು ಸತತ 2 ಜಯದೊಂದಿಗೆ ಸುಲಭವಾಗಿ ಸೆಮಿಫೈನಲ್​ ಸ್ಥಾನವನ್ನು ಒಲಿಸಿಕೊಂಡರೆ, ಬಿ ಗುಂಪಿನಲ್ಲಿ ಕೊನೇ ಲೀಗ್​ ಪಂದ್ಯದವರೆಗೂ ಸೆಮಿಫೈನಲಿಸ್ಟ್​ ತಂಡಗಳ ಕುತೂಹಲ ಉಳಿದುಕೊಂಡಿದೆ. ಆದರೆ ದ. ಆಫ್ರಿಕಾಕ್ಕೆ ಸೋತರೂ ಸೆಮಿಫೈನಲ್​ಗೇರುವ ಅವಕಾಶವಿರುವುದರಿಂದ ಒತ್ತಡ ರಹಿತವಾಗಿ ಆಡಬಹುದಾಗಿದೆ.

ಇಂಗ್ಲೆಂಡ್​ 300 ರನ್​ ಗಳಿಸಿದರೆ, ದ. ಆಫ್ರಿಕಾ ಕನಿಷ್ಠ 97 ರನ್​ ಗಳಿಸಿದರೂ ಸೆಮೀಸ್​ ಪ್ರವೇಶಿಸಲಿದೆ. ದಣ ಆಫ್ರಿಕಾ 207 ರನ್​ಗಳಿಂದ ಸೋತರಷ್ಟೇ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ದ. ಆಫ್ರಿಕಾ ಮೊದಲು ಬ್ಯಾಟಿಂಗ್​ಗೆ ಇಳಿದು 300 ರನ್​ ಪೇರಿಸಿದರೆ, ಇಂಗ್ಲೆಂಡ್​ 11.1 ಓವರ್​ಗಳಲ್ಲೇ ಅದನ್ನು ಚೇಸಿಂಗ್​ ಮಾಡಿ ಗೆದ್ದರಷ್ಟೇ ದ. ಆಫ್ರಿಕಾ ಹೊರಬೀಳಲಿದೆ. ಹೀಗಾಗಿ ಈ ಲೆಕ್ಕಾಚಾರದ ಅನ್ವಯ ದ. ಆಫ್ರಿಕಾ ಸೆಮೀಸ್​ ಪ್ರವೇಶ ಅಧಿಕೃತ ಆಗುವುದಷ್ಟೇ ಬಾಕಿ ಇದೆ ಎನ್ನಬಹುದು. ದ. ಆಫ್ರಿಕಾ ಈ ಪಂದ್ಯ ಗೆದ್ದರೆ ಬಿ ಗುಂಪಿನ ಅಗ್ರಸ್ಥಾನಿಯಾಗಿ ಸೆಮೀಸ್​ ಪ್ರವೇಶಿಸಲಿದೆ. ದ. ಆಫ್ರಿಕಾ ಸೋತರೆ ಆಸೀಸ್​ ಬಿ ಗುಂಪಿನ ಅಗ್ರಸ್ಥಾನ ಉಳಿಸಿಕೊಳ್ಳಲಿದೆ.

ದ. ಆಫ್ರಿಕಾ ತಂಡ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಎದುರು ಭರ್ಜರಿ ಗೆಲುವು ದಾಖಲಿಸಿತ್ತು. ಇದರಿಂದ ಉತ್ತಮ ರನ್​ರೇಟ್​ ಕೂಡ ಪಡೆದುಕೊಂಡಿತ್ತು. ಹೀಗಾಗಿ ಆಸ್ಟ್ರೆಲಿಯಾ ವಿರುದ್ಧದ ಪಂದ್ಯ ಮಳೆಯಿಂದಾಗಿ ಒಂದೂ ಎಸೆತವಿಲ್ಲದೆ ರದ್ದುಗೊಂಡಿರುವುದೂ, ಹರಿಣಗಳಿಗೆ ಇದು ಅನುಕೂಲಕರವೇ ಆಗಿದೆ.

ಮತ್ತೊಂದೆಡೆ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೆಲಿಯಾ ಎದುರು 350ಕ್ಕೂ ಅಧಿಕ ಮೊತ್ತ ಪೇರಿಸಿ ಸೋತಿದ್ದ ಇಂಗ್ಲೆಂಡ್​, ಅಫ್ಘಾನಿಸ್ತಾನ ವಿರುದ್ಧ 326 ರನ್​ಗಳ ಬೃಹತ್​ ಮೊತ್ತದ ಚೇಸಿಂಗ್​ನಲ್ಲಿ ಎಡವಿತ್ತು. ಇದರಿಂದಾಗಿ ಉಪಖಂಡದ ಐಸಿಸಿ ಟೂರ್ನಿಯಲ್ಲಿ ಆಂಗ್ಲರ ನಿರಾಶಾದಾಯಕ ನಿರ್ವಹಣೆ ಮುಂದುವರಿದಿದೆ.

ದ. ಆಫ್ರಿಕಾ ತಂಡದ ಬ್ಯಾಟರ್​ಗಳಾದ ರ್ಯಾನ್​ ರಿಕೆಲ್​ಟನ್​, ನಾಯಕ ಟೆಂಬಾ ಬವುಮಾ, ವಾನ್​ ಡರ್​ ಡುಸೆನ್​, ಏಡನ್​ ಮಾರ್ಕ್ರಮ್​ರಂಥ ಪ್ರಮುಖ ಬ್ಯಾಟರ್​ಗಳು ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಫಿಟ್ನೆಸ್​ ಸಮಸ್ಯೆಯಿಂದಾಗಿ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ಸ್ಫೋಟಕ ಬ್ಯಾಟರ್​ ಹೆನ್ರಿಕ್​ ಕ್ಲಾಸೆನ್​ ಈ ಬಾರಿ ಕಣಕ್ಕಿಳಿಯುವ ನಿರೀಕ್ಷೆ ಇದ್ದು, ಹರಿಣಗಳಿಗೆ ಇನ್ನಷ್ಟು ಹೆಚ್ಚಿನ ಬಲ ಸಿಗಲಿದೆ.

ಆಂಗ್ಲರಿಗೆ ಫಾರ್ಮ್​ ಚಿಂತೆ

ಪ್ರಮುಖ ಬ್ಯಾಟರ್​-ಬೌಲರ್​ಗಳು ಲಯದಲ್ಲಿ ಇರದಿರುವುದು ಆಂಗ್ಲರ ಪಾಲಿ ಟೂರ್ನಿಯಲ್ಲಿ ಪ್ರಮುಖ ಹಿನ್ನಡೆ ಎನಿಸಿದೆ. ಕಳೆದ ಭಾರತ ಪ್ರವಾಸದಿಂದಲೇ ಇಂಗ್ಲೆಂಡ್​ ಆಟಗಾರರು ಉತ್ತಮ ಫಾರ್ಮ್​ನಲ್ಲಿ ಕಾಣಿಸಿಕೊಂಡಿಲ್ಲ. ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ 0&3ರಿಂದ ವೈಟ್​ವಾಷ್​ ಎದುರಿಸಿದ್ದು, ಆಂಗ್ಲರಿಗೆ ಟೂರ್ನಿಗೆ ಮೊದಲೇ ಅಪಾಯದ ಎಚ್ಚರಿಕೆ ಗಂಟೆ ರವಾನಿಸಿತ್ತು. ಮೊದಲ ಪಂದ್ಯದಲ್ಲಿ ಬೆನ್​ ಡಕೆಟ್​, 2ನೇ ಪಂದ್ಯದಲ್ಲಿ ಜೋ ರೂಟ್​ ಏಕಾಂಗಿ ಹೋರಾಟ ಗೆಲುವು ತಂದುಕೊಡಲಿಲ್ಲ.

ಇಂಗ್ಲೆಂಡ್​ಗೆ ಉಪಖಂಡದ ಕಂಟಕ

ಇಂಗ್ಲೆಂಡ್​ ತಂಡ ಉಪಖಂಡದ ಐಸಿಸಿ ಟೂರ್ನಿಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಮತ್ತು ಉಪಖಂಡದ ವಾತಾವರಣಕ್ಕೆ ತಕ್ಕಂತೆ ಕಾರ್ಯತಂತ್ರಗಳನ್ನು ರೂಪಿಸದೆ ಇರುವುದು ದೊಡ್ಡ ಹಿನ್ನಡೆ ಎನಿಸಿದೆ. 2021ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಸೆಮೀಸ್​ನಲ್ಲಿ ಎಡವಿದ್ದ ಇಂಗ್ಲೆಂಡ್​, ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್​ನಲ್ಲಿ ಲೀಗ್​ ಹಂತದಲ್ಲೇ ನಿರ್ಗಮಿಸಿತ್ತು. ಇದೀಗ ಪಾಕಿಸ್ತಾನ ಆತಿಥ್ಯದಲ್ಲೂ ಇಂಗ್ಲೆಂಡ್​ ಎರಡೇ ಪಂದ್ಯಗಳಲ್ಲಿ ಪ್ರಶಸ್ತಿ ರೇಸ್​ನಿಂದ ಹೊರಬಿದ್ದಿದೆ.

ಮುಖಾಮುಖಿ: 70

ಇಂಗ್ಲೆಂಡ್​: 30

ದ. ಆಫ್ರಿಕಾ: 34

ಟೈ: 1

ರದ್ದು: 5

*ಆರಂಭ: ಮಧ್ಯಾಹ್ನ 2.30

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.