ಕ್ರೀಡೆ

ಇಂದು ಆಂಗ್ಲರೆದುರು ಕೊನೇ ಏಕದಿನ; ಟೀಮ್​ ಇಂಡಿಯಾಗೆ ಕ್ಲೀನ್​ಸ್ವೀಪ್​ ತವಕ

ಅಹಮದಾಬಾದ್​: ಸತತ ಎರಡು ಜಯದೊಂದಿಗೆ ಸರಣಿ ವಶಪಡಿಸಿಕೊಂಡಿರುವ ಟೀಮ್​ ಇಂಡಿಯಾ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಗೆದ್ದು ಕ್ಲೀನ್​ಸ್ವೀಪ್​ ಸಾಧಿಸುವ ತವಕದಲ್ಲಿದೆ. ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಆಡಲಿರುವ ಕೊನೇ ಪಂದ್ಯವನ್ನು ರೋಹಿತ್​ ಶರ್ಮ ಬಳಗ ಅಭ್ಯಾಸ ಮತ್ತು ತಂಡ ಸಂಯೋಜನೆ ಅಂತಿಮಗೊಳಿಸಲು ಬಳಸಿಕೊಳ್ಳುವ ನಿರೀಕ್ಷೆ ಇದೆ.

2023ರ ತವರಿ ಏಕದಿನ ವಿಶ್ವಕಪ್​ನಲ್ಲಿ ಫೈನಲ್​ ಪಂದ್ಯದ ಸೋಲಿನ ಬಳಿಕ ಭಾರತ ತಂಡ ವಿಶ್ವದ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಆಡಲಿದ್ದು, ಆಗಿನ ಕಹಿ ಅನುಭವವನ್ನು ಮರೆಸುವ ಹಂಬಲದಲ್ಲಿದೆ. ನಾಯಕ ರೋಹಿತ್​ ಶರ್ಮ ಬ್ಯಾಟಿಂಗ್​ನಲ್ಲಿ ಲಯಕ್ಕೆ ಮರಳಿರುವುದು ಭಾರತ ತಂಡವನ್ನು ತುಸು ನಿರಾಳಗೊಳಿಸಿದೆ. ಜತೆಗೆ 37 ವರ್ಷದ ರೋಹಿತ್​ ಈ ಬಾರಿ ಇನ್ನಷ್ಟು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಜೋಸ್​ ಬಟ್ಲರ್​ ಬಳಗ ಏಕದಿನ ಸರಣಿಯಲ್ಲಿ ಭಾರತಕ್ಕೆ ನಿರೀತ ಪ್ರತಿಸ್ಪರ್ಧೆ ನೀಡಲು ಶಕ್ತವಾಗಿಲ್ಲ. ಬ್ಯಾಟರ್​ಗಳು ಉತ್ತಮ ಆರಂಭ ಕಂಡರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಲರಾಗುತ್ತಿರುವುದು ಹಿನ್ನಡೆ ತಂದಿದೆ. ಫಿಲ್​ ಸಾಲ್ಟ್​, ಬೆನ್​ ಡಕೆಟ್​, ಹ್ಯಾರಿ ಬ್ರೂಕ್​, ಜೋ ರೂಟ್​ ಲಯದಲ್ಲಿದ್ದರೂ, ದೊಡ್ಡ ಮೊತ್ತ ಪೇರಿಸಿಲ್ಲ. ಬೌಲಿಂಗ್​ನಲ್ಲಿ ಸ್ಪಿನ್ನರ್​ ಆದಿಲ್​ ರಶೀದ್​ ಹೊರತುಪಡಿಸಿ ಇತರ ಬೌಲರ್​ಗಳು ಪರಿಣಾಮಕಾರಿ ಎನಿಸಿಲ್ಲ.

ಟೀಮ್​ ನ್ಯೂಸ್​:

ಭಾರತ: ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಭಾರತಕ್ಕೆ ಯಾವುದೇ ಅಭ್ಯಾಸ ಪಂದ್ಯ ನಿಗದಿಯಾಗಿಲ್ಲ. ಹೀಗಾಗಿ ಭಾರತ ಇದನ್ನೇ ಅಭ್ಯಾಸ ಪಂದ್ಯವನ್ನಾಗಿ ಬಳಸಿಕೊಳ್ಳಲು ಮುಂದಾದರೆ, ರಿಷಭ್​ ಪಂತ್​ ಮತ್ತು ಅರ್ಷದೀಪ್​ ಸಿಂಗ್​ಗೆ ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಒಂದು ಪಂದ್ಯ ಆಡುವ ಅವಕಾಶ ಕಲ್ಪಿಸಬಹುದು. ಜತೆಗೆ ಸರಣಿಯ ಮೊದಲ ಪಂದ್ಯದ ಬಳಿಕ ಕುಲದೀಪ್​ ಯಾದವ್​ ಕೂಡ ಮತ್ತೊಮ್ಮೆ ಮರಳಿ ಕಣಕ್ಕಿಳಿಯಬಹುದು. ಆಗ ಕೆಎಲ್​ ರಾಹುಲ್​, ಹರ್ಷಿತ್​ ರಾಣಾ ಮತ್ತು ವರುಣ್​ ಚಕ್ರವರ್ತಿ ಹೊರಗುಳಿಯಬೇಕಾಗುತ್ತದೆ.

ಇಂಗ್ಲೆಂಡ್​: ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಆಲ್ರೌಂಡರ್​ ಬೆಡನ್​ ಕರ್ಸ್​ ಮತ್ತು ವೇಗಿ ಜೋ್ರಾ ಆರ್ಚರ್​ ಈ ಬಾರಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಗಾಯದಿಂದಾಗಿ ಹೊರಬಿದ್ದಿರುವ ಜೇಕಬ್​ ಬೆಥೆಲ್​ ಬದಲಿಗೆ ಬುಲಾವ್​ ಪಡೆದಿರುವ ಬ್ಯಾಟರ್​ ಟಾಮ್​ ಬ್ಯಾಂಟನ್​ ಬರೋಬ್ಬರಿ 4 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಆಗಿ ಮರಳಿ ಕಣಕ್ಕಿಯಲಿದ್ದಾರೆ. ಇದರಿಂದ ತಂಡದ ಬ್ಯಾಟಿಂಗ್​ ಕ್ರಮಾಂಕದಲ್ಲೂ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆ ಇದೆ.

*ಆರಂಭ: ಮಧ್ಯಾಹ್ನ 1.30

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಸ್ನಿ+ಹಾಟ್​ಸ್ಟಾರ್​.

ರೋಹಿತ್​ ನಂತರ ಕೊಹ್ಲಿ ಸರದಿ?

ಕಟಕ್​ನಲ್ಲಿ ಬಿರುಸಿನ ಶತಕ ಸಿಡಿಸುವ ಮೂಲಕ ನಾಯಕ ರೋಹಿತ್​ ಶರ್ಮ ಭರ್ಜರಿ ಲಯಕ್ಕೆ ಮರಳಿದ್ದಾರೆ ಮತ್ತು ತಮ್ಮ ಟೀಕಾಕಾರರ ಬಾಯಿಯನ್ನೂ ಮುಚ್ಚಿಸಿದ್ದಾರೆ. ಇದೀಗ ಮತ್ತೋರ್ವ ಅನುಭವಿ ಮತ್ತು ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಕೂಡ ಫಾರ್ಮ್​ಗೆ ಮರಳಬೇಕಾದ ಸವಾಲು ಎದುರಿಸುತ್ತಿದ್ದಾರೆ. ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಭಾರತ ತಂಡ ಆಡಲಿರುವ ಕೊನೇ ಪಂದ್ಯದಲ್ಲಿ ಕೊಹ್ಲಿ ಲಯ ಕಂಡುಕೊಂಡರೆ, ಐಸಿಸಿ ಟೂರ್ನಿಯಲ್ಲಿ ಒತ್ತಡ ರಹಿತವಾಗಿ ಕಣಕ್ಕಿಳಿಯುವ ಅವಕಾಶ ಪಡೆಯಲಿದ್ದಾರೆ. ಮೊಣಕಾಲು ನೋವಿನಿಂದಾಗಿ ಸರಣಿಯ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ಕೊಹ್ಲಿ ಕಟಕ್​ನಲ್ಲಿ ನಡೆದ 2ನೇ ಪಂದ್ಯದಲ್ಲಿ ಕೇವಲ 5 ರನ್​ಗಳಿಗೆ ಔಟಾಗಿ ನಿರಾಸೆ ಮೂಡಿಸಿದ್ದರು. ಇದಕ್ಕೆ ಮುನ್ನ ರಣಜಿಯಲ್ಲಿ ಆಡಿದ ಏಕೈಕ ಇನಿಂಗ್ಸ್​ನಲ್ಲೂ 6 ರನ್​ಗಳಿಗೆ ಔಟಾಗಿದ್ದರು. ಇದೀಗ ರೋಹಿತ್​ ಲಯಕ್ಕೆ ಮರಳಿದ ಸ್ಫೂರ್ತಿಯಲ್ಲಿ ಕೊಹ್ಲಿ ಕೂಡ ಬ್ಯಾಟಿಂಗ್ ಫಾರ್ಮ್​ಗೆ ಮರಳಬೇಕಿದೆ.

*13: ರೋಹಿತ್​ ಶರ್ಮ ಇನ್ನು 13 ರನ್​ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 11 ಸಾವಿರ ರನ್​ ಪೂರೈಸಿದ ವಿಶ್ವದ 10ನೇ ಬ್ಯಾಟರ್​ ಮತ್ತು 4ನೇ ಭಾರತೀಯ ಎನಿಸಲಿದ್ದಾರೆ. ತೆಂಡುಲ್ಕರ್​, ಕೊಹ್ಲಿ, ಗಂಗೂಲಿ ಹಿಂದಿನ ಸಾಧಕರು.

*89: ವಿರಾಟ್​ ಕೊಹ್ಲಿ ಇನ್ನು 89 ರನ್​ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್​ ಪೂರೈಸಿದ ವಿಶ್ವದ 3ನೇ ಬ್ಯಾಟರ್​ ಮತ್ತು 2ನೇ ಭಾರತೀಯ ಎನಿಸಲಿದ್ದಾರೆ. ಸಚಿನ್​ ತೆಂಡುಲ್ಕರ್​ ಮತ್ತು ಕುಮಾರ ಸಂಗಕ್ಕರ ಮೊದಲಿಬ್ಬರು ಸಾಧಕರು.