ಕ್ರೀಡೆ

VIDEO: 4ನೇ ಬಾರಿ ಸಿಪಿಎಲ್ ಟ್ರೋಫಿ ಗೆದ್ದುಕೊಂಡ ಟ್ರಿನಿಬಾಗೊ ನೈಟ್ ರೈಡರ್ಸ್

ತೌರಬ: ಲೀಗ್‌ನುದ್ದಕ್ಕೂ ಅಜೇಯ ಸಾಧನೆಯೊಂದಿಗೆ ಪ್ರಶಸ್ತಿ ಸುತ್ತಿಗೇರಿದ್ದ ಟ್ರಿನಿಬಾಗೊ ನೈಟ್ ರೈಡರ್ಸ್‌ (ಟಿಕೆಆರ್) ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಿಕೆಆರ್ ತಂಡ 8 ವಿಕೆಟ್‌ಗಳಿಂದ ಸೇಂಟ್ ಲೂಸಿಯಾ ಜೌಕ್ಸ್ ವಿರುದ್ಧ ಜಯ ದಾಖಲಿಸಿತು. ಇದರೊಂದಿಗೆ ಲೀಗ್‌ನಲ್ಲಿ ಸತತ 12ನೇ ಗೆಲುವಿನೊಂದಿಗೆ ಅಜೇಯ ಸಾಧನೆ ಮಾಡಿತು. ಇದರೊಂದಿಗೆ 4ನೇ ಬಾರಿಗೆ ಸಿಪಿಎಲ್ ಟ್ರೋಫಿ ಗೆದ್ದುಕೊಂಡಿತು. ಇದಕ್ಕೂ ಮೊದಲು 2015, 2017 ಹಾಗೂ 2018ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಟಾಸ್ ಜಯಿಸಿದ ಟಿಕೆಆರ್ ತಂಡದ ನಾಯಕ ಕೈರಾನ್ ಪೊಲ್ಲಾರ್ಡ್, ಸೇಂಟ್ ಲೂಸಿಯಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಲೂಸಿಯಾ 19.1 ಓವರ್‌ಗಳಲ್ಲಿ 154 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಟಿಕೆಆರ್ ತಂಡ, ಲೆಂಡ್ಲೆ ಸಿಮ್ಮನ್ಸ್ (84*ರನ್, 49 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ಡರೇನ್ ಬ್ರಾವೊ (58*ರನ್, 47 ಎಸೆತ, 2 ಬೌಂಡರಿ, 6 ಸಿಕ್ಸರ್) ಜೋಡಿಯ ಮುರಿಯದ 3ನೇ ವಿಕೆಟ್‌ಗೆ 138 ರನ್ ಪೇರಿಸಿದ ಫಲವಾಗಿ 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 157 ರನ್ ಗಳಿಸಿ ಜಯದಾಖಲಿಸಿತು.

ಸೇಂಟ್ ಲೂಸಿಯಾ ಜೌಕ್ಸ್: 19.1 ಓವರ್‌ಗಳಲ್ಲಿ 154 (ಹೇಮಂತ್ ದೆಯಾಲ್ 29, ಫ್ಲೆಚರ್ 39, ರೋಸ್ಟನ್ ಚೇಸ್ 22, ನಜಿಬುಲ್ಲಾಹ ಜರ್ದಾನ್ 24, ಕೈರಾನ್ ಪೊಲ್ಲಾರ್ಡ್ 30ಕ್ಕೆ 4, ಅಲಿ ಖಾನ್ 25ಕ್ಕೆ 2, ವಾದ್ ಅಹಮದ್ 22ಕ್ಕೆ 2). ಟಿಕೆಆರ್: 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 157 (ಸಿಮ್ಮನ್ಸ್ 84*, ಡರೇನ್ ಬ್ರಾವೊ 58*).