ಕ್ರೀಡೆ

ಇಂದು ಆರ್‌ಸಿಬಿಗೆ ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ಸವಾಲು

ಮುಂಬೈ: ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋತು ಒತ್ತಡಕ್ಕೆ ಸಿಲುಕಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಐಪಿಎಲ್-15ರಲ್ಲಿ ಶನಿವಾರ ನಡೆಯಲಿರುವ ಡಬಲ್ ಹೆಡರ್ಸ್‌ನ ಮೊದಲ ಪಂದ್ಯದಲ್ಲಿ ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ತಂಡದಿಂದ ಕಠಿಣ ಸವಾಲು ಎದುರಾಗಲಿದೆ. ಟೂರ್ನಿಯಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 1ರಲ್ಲಷ್ಟೇ ಸೋತಿರುವ ಹಾರ್ದಿಕ್ ಪಾಂಡ್ಯ ಬಳಗ, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದರೆ ಪ್ಲೇಆಫ್​ ಸ್ಥಾನ ಬಹುತೇಕ ಖಚಿತಗೊಳ್ಳಲಿದೆ.

ಟೂರ್ನಿಯಲ್ಲಿ ಒಂದೇ ಗುಂಪಿನಲ್ಲಿರುವ ಆರ್‌ಸಿಬಿ-ಟೈಟಾನ್ಸ್ ತಂಡಗಳ ಮೊದಲ ಮುಖಾಮುಖಿ ಇದಾಗಿದ್ದು, 2ನೇ ಕಾದಾಟ ಮೇ 19ರಂದು ನಡೆಯಲಿದೆ. ಅದಕ್ಕೆ ಮುನ್ನ ಪ್ಲೇಆಫ್​​ ಸ್ಥಾನ ಖಚಿತಪಡಿಸಿಕೊಳ್ಳಲು ಅಥವಾ ರೇಸ್‌ನಲ್ಲಿ ಉಳಿದುಕೊಳ್ಳಲು ಫಾಫ್​ ಡು ಪ್ಲೆಸಿಸ್ ಪಡೆಗೆ ಈ ಪಂದ್ಯದಲ್ಲಿ ಗೆಲುವು ಅಗತ್ಯವಾಗಿದೆ. ಬಲಿಷ್ಠ ತಂಡದೆದುರು ಗೆದ್ದರೆ ಆರ್‌ಸಿಬಿ ತಂಡದ ಆತ್ಮವಿಶ್ವಾಸವೂ ವೃದ್ಧಿಸಲಿದೆ.

ಕೊಹ್ಲಿ ಫಾರ್ಮ್ ಚಿಂತೆ

ಟೂರ್ನಿಯಲ್ಲಿ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 128 ರನ್ ಮಾತ್ರ ಗಳಿಸಿರುವ ವಿರಾಟ್ ಕೊಹ್ಲಿ ಅವರ ಫಾರ್ಮ್ ಆರ್‌ಸಿಬಿ ತಂಡಕ್ಕೆ ಕಳವಳ ಮೂಡಿಸಿದೆ. ಇದುವರೆಗೆ ಒಂದೂ ಅರ್ಧಶತಕ ಬಾರಿಸದಿರುವ ಕೊಹ್ಲಿ, 48 ರನ್ ಗಳಿಸಿದ್ದೇ ಗರಿಷ್ಠವೆನಿಸಿದೆ. ಇದಲ್ಲದೆ 2 ಬಾರಿ ಶೂನ್ಯ ಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದರೂ ಕೊಹ್ಲಿ 9 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಕೊಹ್ಲಿ ವೈಲ್ಯದಿಂದ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗವೂ ಅಸ್ಥಿರ ನಿರ್ವಹಣೆ ತೋರುತ್ತಿದೆ. ಹೀಗಾಗಿ ಆರ್‌ಸಿಬಿ ಗೆಲುವಿನ ಲಯಕ್ಕೆ ಮರಳಲು ಕೊಹ್ಲಿ ರನ್‌ಬರ ನೀಗಿಸಿಕೊಳ್ಳುವುದು ಕೂಡ ಅಗತ್ಯವಾಗಿದೆ.

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಟೀಮ್ ನ್ಯೂಸ್:

ಆರ್‌ಸಿಬಿ: ಸತತ ವೈಫಲ್ಯದ ನಡುವೆಯೂ ಕೊಹ್ಲಿ ಅವರನ್ನು ಆಡುವ ಬಳಗದಿಂದ ಹೊರಗಿಡುವ ಧೈರ್ಯವನ್ನು ಆರ್‌ಸಿಬಿ ತಂಡ ಮಾಡದು. ಆದರೆ ಸುಯಶ್ ಪ್ರಭುದೇಸಾಯಿ ಅವರನ್ನು ಕೈಬಿಟ್ಟು ಮಹಿಪಾಲ್ ಲೊಮ್ರರ್‌ಗೆ ಅವಕಾಶ ಕಲ್ಪಿಸಬಹುದು.

ಗುಜರಾತ್ ಟೈಟಾನ್ಸ್: ಸತತ 4 ಗೆಲುವಿನ ಲಯದಲ್ಲಿರುವ ಟೈಟಾನ್ಸ್ ತಂಡದ 11ರ ಬಳಗ ಬಲಿಷ್ಠವಾಗಿಯೇ ಇದೆ. ಆದರೂ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಲಾಕಿ ರ್ಗ್ಯುಸನ್ ಬದಲಿಗೆ ವಿಂಡೀಸ್ ಆಲ್ರೌಂಡರ್ ಡೊಮಿನಿಕ್ ಡ್ರೇಕ್ಸ್, ವರುಣ್ ಆರನ್ ಅಥವಾ ಪ್ರದೀಪ್ ಸಂಗ್ವಾನ್‌ಗೆ ಅವಕಾಶ ನೀಡುವ ಚಿಂತನೆ ನಡೆಸಬಹುದು.

8: ಹಾಲಿ ಐಪಿಎಲ್‌ನಲ್ಲಿ ಕನಿಷ್ಠ 8 ಇನಿಂಗ್ಸ್ ಆಡಿರುವ ಬ್ಯಾಟರ್‌ಗಳ ಪೈಕಿ ವಿರಾಟ್ ಕೊಹ್ಲಿ (18.28) ಅತ್ಯಂತ ಕಡಿಮೆ ಸರಾಸರಿ ಹೊಂದಿದ್ದಾರೆ.

100: ಹಾರ್ದಿಕ್ ಪಾಂಡ್ಯಗೆ ಇದು 100ನೇ ಐಪಿಎಲ್ ಪಂದ್ಯವಾಗಿರಲಿದೆ.