ಬೆಂಗಳೂರು: ದಿಗ್ಗಜ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ 8 ವರ್ಷಗಳೇ ಕಳೆದಿವೆ. ಇಂದಿಗೂ ಒಂದಿಲ್ಲೊಂದು ವಿಭಾಗದಲ್ಲಿ ಕ್ರಿಕೆಟ್‌ಗಾಗಿ ಸೇವೆ ಸಲ್ಲಿಸುತ್ತಿರುವ ದ್ರಾವಿಡ್ ಅವರನ್ನು ಕಂಡರೆ ಭಾರತದ ಕ್ರಿಕೆಟಿಗರಲ್ಲದೆ, ವಿದೇಶಿ ಆಟಗಾರರಿಗೂ ಅಚ್ಚುಮೆಚ್ಚು. ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗಿ ಟಿನೊ ಬೆಸ್ಟ್, ಪಂದ್ಯವೊಂದರಲ್ಲಿ ದ್ರಾವಿಡ್ ಹ್ಯಾಟ್ರಿಕ್ ಬೌಂಡರಿ ಸಿಡಿಸಿದರೂ ಬಳಿಕ ಅವರು ಹೇಳಿದ ಮಾತು ಸಾಕಷ್ಟು ಉತ್ತೇಜನ ನೀಡಿತು ಎಂದು ಹೇಳಿಕೊಂಡಿದ್ದಾರೆ.
2005ರಲ್ಲಿ ನಡೆದ ಇಂಡಿಯನ್ ಅಯಿಲ್ ಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಆಡಿದ ಮೊದಲ ಏಕದಿನ ಪಂದ್ಯದಲ್ಲೇ ರಾಹುಲ್ ದ್ರಾವಿಡ್ ನನ್ನ ಓವರ್‌ನಲ್ಲಿ ಹ್ಯಾಟ್ರಿಕ್ ಬೌಂಡರಿ ಸಿಡಿಸಿದರು. ಆದರೆ, ಪಂದ್ಯದ ಬಳಿಕ ದ್ರಾವಿಡ್ ಅವರಾಗಿಯೇ ಬಂದು ಮಾತನಾಡಿಸಿದರು. ‘ಯಂಗ್ ಮ್ಯಾನ್, ನಿನ್ನ ಶಕ್ತಿಯನ್ನು ಮೆಚ್ಚಿದೆ. ಇದೇ ರೀತಿ ಮುಂದುವರಿಸು, ಬೌಂಡರಿ ಹೊಡೆಸಿಕೊಂಡ ತಕ್ಷಣ ನಿಲ್ಲಿಸಬೇಡ, ನಿನ್ನ ಹೋರಾಟ ಮುಂದುವರಿಸು’ ಎಂದು ಹೇಳಿದರು. ಅವರ ಮಾತು ನಿಜಕ್ಕೂ ನನಗೆ ಉತ್ತೇಜನ ನೀಡಿತು. ನಾನು ಭಾರತೀಯ ಕ್ರಿಕೆಟಿಗರನ್ನು ತುಂಬಾ ಇಷ್ಟಪಡುತ್ತೇನೆ. ಅದರಲ್ಲೂ ದ್ರಾವಿಡ್ ಸ್ವಲ್ಪ ಜಾಸ್ತಿಯೇ ಎಂದು 38 ವರ್ಷದ ಮಾಜಿ ವೇಗಿ ಹೇಳಿಕೊಂಡಿದ್ದಾರೆ. ಯುವರಾಜ್ ಸಿಂಗ್ ಒಮ್ಮೆ ನನಗೆ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು ಎಂದು ಮೆಲುಕು ಹಾಕಿಕೊಂಡಿದ್ದಾರೆ. ಟಿನೊ ಬೆಸ್ಟ್ ವೆಸ್ಟ್ ಇಂಡೀಸ್ ಪರ 25 ಟೆಸ್ಟ್, 26 ಏಕದಿನ ಹಾಗೂ 6 ಟಿ20 ಪಂದ್ಯಗಳಿಂದ ಕ್ರಮವಾಗಿ 57, 34 ಹಾಗೂ 6 ವಿಕೆಟ್ ಕಬಳಿಸಿದ್ದಾರೆ.
2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದ್ರಾವಿಡ್ ನಿವೃತ್ತಿ ಹೇಳಿದ್ದರೂ ಬಳಿಕ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾಯಕ ಹಾಗೂ ಕೋಚ್ ಆಗಿದ್ದರು. ಭಾರತ ಎ ಹಾಗೂ 19 ವಯೋಮಿತಿ ತಂಡಕ್ಕೆ ಕೋಚ್ ಆಗಿದ್ದ ದ್ರಾವಿಡ್, ಸದ್ಯ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿದ್ದಾರೆ. 2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ 19 ವಯೋಮಿತಿ ವಿಶ್ವಕಪ್‌ನಲ್ಲಿ ದ್ರಾವಿಡ್ ಮಾರ್ಗದರ್ಶನದ ಭಾರತ ಚಾಂಪಿಯನ್ ಆಗಿತ್ತು.