Tilak Varma : ಟೀಮ್ ಇಂಡಿಯಾದ ಯುವ ಆಟಗಾರ ತಿಲಕ್ ವರ್ಮ, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಸತತ ಶತಕ ಬಾರಿಸಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಒಟ್ಟು ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಇದೇ ಖುಷಿಯಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರು ತಿಲಕ್ ವರ್ಮ ಜತೆ ಹಾಸ್ಯಮಯ ಮಾತುಕತೆಯನ್ನು ನಡೆಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೂರ್ಯಕುಮಾರ್: ತಿಲಕ್ ವರ್ಮ ನಾನೊಂದು ಪ್ರಶ್ನೆ ಕೇಳ್ತಾ ಇದ್ದೀನಿ... ನಿಮ್ಮ ಹೇರ್ ಸ್ಟೈಲ್ ಸೀಕ್ರೆಟ್ ಏನು? ನಿಮ್ಮ ಕೂದಲು ನೋಡಿ ಎಲ್ಲರೂ ನಿಮ್ಮನ್ನು ಅಲ್ಲು ಅರ್ಜುನ್.. ಅಲ್ಲು ಅರ್ಜುನ್ ಎಂದು ಕರೆಯುತ್ತಿದ್ದಾರೆ. ಇದೇನು, ಆ ತೆಲುಗು ಸೂಪರ್ ಸ್ಟಾರ್ ಮತ್ತು ನೀವು ಇಲ್ಲಿದ್ದೀರಿ.
ತಿಲಕ್ ವರ್ಮ: ಇದರಲ್ಲಿ ಅಂಥದ್ದು ಏನು ಇಲ್ಲ. ಎಲ್ಲವೂ ಶುರುವಾಗಿದ್ದೇ ನಿಮ್ಮಿಂದ. ನನ್ನ ಉದ್ದನೆಯ ಕೂದಲು ನೋಡಿ ಅಲ್ಲು ಅರ್ಜುನ್ ಅಂತ ಕರೆಯಲು ಶುರು ಮಾಡಿದ್ದೇ ನೀವು. ಸಹೋದರ ನೀವು ಅಲ್ಲು ಅರ್ಜುನ್ ರೀತಿ ಕಾಣುತ್ತಿದ್ದೀರಿ ಎಂದು ಹೇಳಿದಿರಿ. ಒಂದು ಸಲ ನೀವು ಹೇಳಿದ್ದಕ್ಕೆ ಅದು ಎಲ್ಲೆಡೆ ಹಡಿದಾಡಿತು. ಉದ್ದನೆಯ ಕೂದಲು ನನಗೆ ತುಂಬಾ ಇಷ್ಟ. ಅಲ್ಲದೆ, ಉದ್ದನೆಯ ಕೂದಲಿನೊಂದಿಗೆ ಹೆಲ್ಮೆಟ್ ಧರಿಸುವುದು ಒಳ್ಳೆಯದು ಎಂದು ನಾನು ಭಾವಿಸಿದ್ದೇನೆ.
ಸೂರ್ಯಕುಮಾರ್: ಹಾಗಾದರೆ ನೀವು ಪುಷ್ಪ-3 ಸಿನಿಮಾದಲ್ಲಿ ಕೆಲಸ ಮಾಡುತ್ತೀರಾ?
ತಿಲಕ್ ವರ್ಮ : ಹಾಗೇನಿಲ್ಲ... ಬಾಲ್ ಮತ್ತು ಬ್ಯಾಟ್ ಹಿಡಿದು ಕ್ರಿಕೆಟ್ ಆಡೋದಷ್ಟೇ ನನ್ನ ಕೆಲಸ. ಮೈದಾನದಲ್ಲಿ ಆಡಬೇಕು ಮತ್ತು ಹೊರಗೆ ಹೋಗಿ ಎಂಜಾಯ್ ಮಾಡಬೇಕು. ಉಳಿದದ್ದನ್ನು ಆ ದೇವರು ನೋಡಿಕೊಳ್ಳುತ್ತಾನೆ.
ತಿಲಕ್ ವರ್ಮಾ ಹೇಳಿದ ಉತ್ತರ ಕೇಳಿದ ಸೂರ್ಯ ಕೊನೆಯಲ್ಲಿ ಈ ಹುಡುಗ ಎಷ್ಟು ಪ್ರಾಮಾಣಿಕ ಮತ್ತು ಡೌನ್ ಟು ಅರ್ಥ್ ಎಂದು ಹೇಳುತ್ತಾರೆ. ಈ ಮಾತಿನೊಂದಿಗೆ ಸೂರ್ಯ ಮತ್ತು ತಿಲಕ ನಡುವಿನ ಹಾಸ್ಯಮಯ ಸಂಭಾಷಣೆ ಮುಗಿಯುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಹ ಆಟಗಾರರೊಂದಿಗೆ ನಾಯಕ ಸೂರ್ಯಕುಮಾರ್ ಅವರ ಒಡನಾಟ ಕಂಡು ನೆಟ್ಟಿಗರು ಮೆಚ್ಚಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಇನ್ನು ಪಂದ್ಯ ವಿಚಾರಕ್ಕೆ ಬರುವುದಾದರೆ, ವಾಂಡರರ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸರಣಿ ನಿರ್ಣಾಯಕ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ, ಎಡಗೈ ಬ್ಯಾಟರ್ ತಿಲಕ್ ವರ್ಮ (120* ರನ್, 47 ಎಸೆತ, 9 ಬೌಂಡರಿ,10 ಸಿಕ್ಸರ್) ಸತತ ಎರಡನೇ ಶತಕ ಹಾಗೂ ಆರಂಭಿಕ ಸಂಜು ಸ್ಯಾಮ್ಸನ್ (109* ರನ್, 56 ಎಸೆತ, 6 ಬೌಂಡರಿ, 9 ಸಿಕ್ಸರ್) ಬಿರುಸಿನ ಶತಕದಬ್ಬರದ ನೆರವಿನಿಂದ ರನ್‌ಪ್ರವಾಹ ಹರಿಸಿತು. 1 ವಿಕೆಟ್ ನಷ್ಟಕ್ಕೆ 283 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಪ್ರತಿಯಾಗಿ ವೇಗಿ ಅರ್ಷದೀಪ್ ಸಿಂಗ್ (20ಕ್ಕೆ3) ದಾಳಿಗೆ ತತ್ತರಿಸಿದ ದ.ಆಫ್ರಿಕಾ 10 ರನ್‌ಗಳಿಗೆ ಅಗ್ರ 4 ವಿಕೆಟ್ ಕಳೆದುಕೊಂಡಿತು. ಆಗ ಟ್ರಿಸ್ಟಾನ್ ಸ್ಟಬ್ಸ್ (43) ಹಾಗೂ ಡೇವಿಡ್ ಮಿಲ್ಲರ್ (36) ನಡೆಸಿದ ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಹರಿಣ ಪಡೆ 18.2 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಸೂರ್ಯಕುಮಾರ್ ಬಳಗ 4 ಪಂದ್ಯಗಳ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿತು. ಟಿ20 ವಿಶ್ವಚಾಂಪಿಯನ್ ತಂಡ 2024ರಲ್ಲಿ ಆಡಿದ ಕೊನೇ ಪಂದ್ಯ ಇದಾಗಿದ್ದು, ಹಾಲಿ ವರ್ಷ ಆಡಿದ 26 ಪಂದ್ಯಗಳಲ್ಲಿ 24ನೇ ಗೆಲುವು ಕಂಡಿದೆ. (ಏಜೆನ್ಸೀಸ್)