Asia Cup 2025: ಇದೇ ಸೆ.9ರಿಂದ 28 ರವರೆಗೆ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾಗುವುದಷ್ಟೇ ಬಾಕಿ ಉಳಿದಿದೆ. ತಂಡದಲ್ಲಿ ಯಾರೆಲ್ಲ ಇರಲಿದ್ದಾರೆ? ಯಾರಿಗೆಲ್ಲ ಅವಕಾಶ ಸಿಗಲಿದೆ? ಎಂಬ ಹಲವು ಕುತೂಹಲಕಾರಿ ಪ್ರಶ್ನೆಗಳು ಸದ್ಯ ಕ್ರಿಕೆಟ್ ಪ್ರಿಯರನ್ನು ಕಾಡತೊಡಗಿದೆ. ಈ ಮಧ್ಯೆ ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆರಂಭಿಕ ಬ್ಯಾಟರ್ ಆಗಿ ಮಿಂಚಿದ್ದ 'ಬೇಬಿ ಬಾಸ್', ವೈಭವ್ ಸೂರ್ಯವಂಶಿಯನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐಗೆ ಸಲಹೆಗಳು ಬಂದಿರುವುದಾಗಿ 'ಹಿಂದೂಸ್ತಾನ್ ಟೈಮ್ಸ್' ವರದಿ ಉಲ್ಲೇಖಿಸಿದೆ.
ಏಷ್ಯಾ ಕಪ್ಗೆ ಯಾರನ್ನು ಆಡಿಸುವುದು ಉತ್ತಮ ಎಂಬ ಲೆಕ್ಕಾಚಾರದಲ್ಲಿ ಮ್ಯಾನೇಜ್ಮೆಂಟ್ ತೊಡಗಿದೆ. ಈ ಕುರಿತಂತೆ ಬಿಸಿಸಿಐ ಆಯ್ಕೆ ಸಮಿತಿಯು, ಸಾಕಷ್ಟು ಬಲವಾದ ನಿರ್ಧಾರಗಳನ್ನು ಕೈಗೊಂಡಿರುವುದಾಗಿ ಸುದ್ದಿಗಳಿವೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ನಾಳೆ (ಆ.19) ಮುಂಬೈನಲ್ಲಿ ಸಭೆ ಸೇರಲಿದೆ. ಈ ವೇಳೆ ಮೂರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಟೆಸ್ಟ್ ಕ್ಯಾಪ್ಟನ್ ಶುಭ್‌ಮನ್ ಗಿಲ್, ವೇಗಿ ಮೊಹಮ್ಮದ್ ಸಿರಾಜ್ ಮತ್ತು ಶ್ರೇಯಸ್ ಅಯ್ಯರ್ರನ್ನು ಆಯ್ಕೆ ಪಟ್ಟಿಯಿಂದ ಕೈಬಿಡಲು ನಿರ್ಧರಿಸಿದೆ ಎನ್ನಲಾಗಿದೆ.
ಆಯ್ಕೆ ಸಮಿತಿಯು ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ರನ್ನು ಆರಂಭಿಕ ಬ್ಯಾಟರ್ ಆಗಿ ಕಳುಹಿಸಲು ಮೊದಲ ಆದ್ಯತೆ ನೀಡಿದೆ. ಹೀಗಾಗಿ, ಯಶಸ್ವಿ ಜೈಸ್ವಾಲ್ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಗಳಿವೆ. ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್ಆರ್ ಪರ ಸ್ಪೋಟಕ ಓಪನಿಂಗ್ ನೀಡಿದ್ದ 14 ವರ್ಷದ ವೈಭವ್ ಸೂರ್ಯವಂಶಿ, ತಾನೊಬ್ಬ ಟಿ20 ಸ್ಪೆಷಲಿಸ್ಟ್ ಎಂಬುದನ್ನು ಇದೊಂದು ಆವೃತ್ತಿಯಲ್ಲೇ ಸಾಬೀತುಪಡಿಸಿದರು. ಈ ವಿಷಯವನ್ನು ಮಾಜಿ ರಾಷ್ಟ್ರೀಯ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ಕೂಡ ಮುನ್ನೆಲೆಗೆ ತಂದಿದ್ದು, ವೈಭವ್ರನ್ನು ಏಷ್ಯಾ ಕಪ್ಗೆ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
"ಈ ವಿಷಯದಲ್ಲಿ ವೈಭವ್ರನ್ನು ಕಾಯುವಂತೆ ಮಾಡಬೇಡಿ. ಈಗಾಗಲೇ ಆತ ಉತ್ತಮ ಫಾರ್ಮ್ನಲ್ಲಿದ್ದಾನೆ. ನಾನೇನಾದರೂ ಅಧ್ಯಕ್ಷನಾಗಿದ್ದರೆ, ಖಂಡಿತವಾಗಿಯೂ ಅವರನ್ನು ತಂಡದಲ್ಲಿ ಆಡಿಸುತ್ತಿದ್ದೆ" ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).