ಕ್ರೀಡೆ

ಟಿ-20 ವಿಶ್ವಕಪ್​ನಲ್ಲಿ ಸೆಮೀಸ್​ಗೆ ಲಗ್ಗೆ; ಅಫ್ಘನ್​ನಲ್ಲಿ ಮುಗಿಲು ಮುಟ್ಟಿದ ಸಂಭ್ರಮ, ಖುದ್ದು ಕರೆ ಮಾಡಿ ಅಭಿನಂದಿಸಿದ ತಾಲಿಬಾನ್ ಆಡಳಿತ

ಕಾಬೂಲ್​: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್​ ತಂಡವು ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸಿದ್ದು, ಘಟಾನುಘಟಿಗಳಿಗೆ ಮಣ್ಣು ಮುಕ್ಕಿಸಿರುವುದು ಹಲವರ ಹುಬ್ಬೇರಿಸಿದೆ. ತಮ್ಮ ದೇಶದ ಕ್ರಿಕೆಟ್​ ತಂಡವು ಮೊದಲ ಬಾರಿಗೆ ಐಸಿಸಿ ನಡೆಸುವ ಟೂರ್ನಮೆಂಟ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ ಐತಿಹಾಸಿಕ ಕ್ಷಣವನ್ನು ಲಕ್ಷಾಂತರ ಜನರು ಸಂಭ್ರಮಿಸಿದ್ದು, ಈ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಸೆಮಿಸ್‌ಗೆ ಎಂಟ್ರಿ ಕೊಟ್ಟಿದೆ. ಇದರಿಂದ ಹರ್ಷಗೊಂಡ ತಾಲಿಬಾನ್‌ ವಿದೇಶಾಂಗ ಸಚಿವ ಆಮೀರ್ ಖಾನ್​ ಮುತ್ತಕಿ ತಂಡದ ನಾಯಕ ರಶೀದ್​ ಖಾನ್​ಗೆ ವಿಡಿಯೋ ಕಾಲ್​ ಮೂಲಕ ಅಭಿನಂದಿಸಿದ್ದು, ಇದು ಸಖತ್​ ವೈರಲ್​ ಆಗುತ್ತಿದೆ.

ಇನ್ನು ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್‌ ಅಭಿಮಾನಿಗಳ ಸಂಭ್ರಮವಂತೂ ಮುಗಿಲು ಮುಟ್ಟಿದೆ. ಗೆದ್ದ ಖುಷಿಯಲ್ಲಿದ್ದ ಅಫ್ಘಾನ್ ತಂಡದ ಆಟಗಾರರ ಕಣ್ಣಲ್ಲಿ ಖುಷಿಯಿಂದ ಆನಂದಬಾಷ್ಪ ಹರಿಸಿದರೆ, ತಂಡವು ಗೆಲ್ಲುತ್ತಿದ್ದಂತೆಯೇ ತಾಲಿಬಾನ್ ನಾಡಲ್ಲಿ ಜನರು ಖುಷಿಯಿಂದ ರಸ್ತೆಗಿಳಿದು, ಸಂಭ್ರಮಿಸಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಪೊಲೀಸರು, ನೆರೆದಿದ್ದ ಜನರನ್ನು ಚದುರಿಸಲು ಜಲಫಿರಂಗಿ ಬಳಸಿದರಾದರೂ ಅಭಿಮಾನಿಗಳ ಸಂಭ್ರಮವನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ.

ಅಮೆರಿಕದ ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 115 ರನ್ ಗಳಿಸಿತ್ತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ್ದರಿಂದ ಬಾಂಗ್ಲಾದೇಶ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 19 ಓವರ್‌ಗಳಲ್ಲಿ 114 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದಿತ್ತು. ಆದ್ರೆ ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ 105 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವಿಶ್ವಕಪ್​ಗೆ ವಿದಾಯ ಹೇಳಿತ್ತು.