ಇದೇ ನನ್ನ ಕೊನೆಯ.... ಏಕದಿನ ವಿಶ್ವಕಪ್​ಗೂ ಮುನ್ನ ಅಚ್ಚರಿ ಹೇಳಿಕೆ ನೀಡಿದ ಕಿಂಗ್ ಕೊಹ್ಲಿ | Virat Kohli 
ಕ್ರೀಡೆ

ಭಾರತ ಪರ ಇದೇ ನನ್ನ... ಏಕದಿನ ವಿಶ್ವಕಪ್​ಗೂ ಮುನ್ನ ಅಚ್ಚರಿ ಹೇಳಿಕೆ ನೀಡಿದ ಕಿಂಗ್ ಕೊಹ್ಲಿ | Virat Kohli

ಗುರಿಯು ಸಂಪೂರ್ಣವಾಗಿ ವಿಶ್ವಕಪ್ ಗೆಲ್ಲುವುದು ಅಷ್ಟೇ. ಇದಕ್ಕೆ ಏನು ಬೇಕೋ ಅದನ್ನು ಕೊಡಲು ನಾನಂತು ಸಂಪೂರ್ಣ ಸಿದ್ಧ. ಟ್ರೋಫಿ ಎತ್ತಿಹಿಡಿಯಲು ಏನೆಲ್ಲ ಕೊಡುಗೆ ನೀಡಬೇಕೋ ಅದಕ್ಕೆ ನಾನು ರೆಡಿ ಎಂದಿದ್ದಾರೆ.

Virat Kohli: ಟೀಮ್​ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ಅಭಿಮಾನಿಗಳ ನೆಚ್ಚಿನ 'ಕಿಂಗ್'​, ವಿರಾಟ್ ಕೊಹ್ಲಿ ಅವರ ಕ್ರಿಕೆಟ್​ ಭವಿಷ್ಯದ ಬಗ್ಗೆ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ವಿರಾಟ್​ರ ಇತ್ತೀಚಿನ ಹೇಳಿಕೆ ಸದ್ಯ ಕೋಟ್ಯಂತರ ಅಭಿಮಾನಿಗಳನ್ನು ಅಕ್ಷರಶಃ ಮಂಕಾಗಿಸಿದೆ.

ಜಿಯೋ ಸ್ಟಾರ್​ ಜತೆಗಿನ ಸಂದರ್ಶನದಲ್ಲಿ 2027ರ ಏಕದಿನ ವಿಶ್ವಕಪ್​ ಕುರಿತಾಗಿ ಮನಬಿಚ್ಚಿ ಮಾತನಾಡಿದ ಕೊಹ್ಲಿ, ಭಾರತ ಪರ ನಾನಾಡಲಿರುವ ಕೊನೆಯ ವಿಶ್ವಕಪ್​ ಇದಾಗಿರಲಿದೆ. ಮತ್ತು ಇದೇ ನನ್ನ ಪ್ರೇರಣೆ. ಗುರಿಯು ಸಂಪೂರ್ಣವಾಗಿ ವಿಶ್ವಕಪ್ ಗೆಲ್ಲುವುದು ಅಷ್ಟೇ. ಇದಕ್ಕೆ ಏನು ಬೇಕೋ ಅದನ್ನು ಕೊಡಲು ನಾನಂತು ಸಂಪೂರ್ಣ ಸಿದ್ಧ. ಟ್ರೋಫಿ ಎತ್ತಿಹಿಡಿಯಲು ಏನೆಲ್ಲ ಕೊಡುಗೆ ನೀಡಬೇಕೋ ಅದಕ್ಕೆ ನಾನು ರೆಡಿ ಎಂದಿದ್ದಾರೆ.

'ರೋಕೊ' ಜೋಡಿ

ವಿರಾಟ್​ ಅವರಿಂದ ಇದೇ ನನ್ನ ಕೊನೆಯ ವಿಶ್ವಕಪ್​ ಎಂಬ ಹೇಳಿಕೆ ಸದ್ಯ ಕ್ರಿಕೆಟ್​ ಪ್ರೇಮಿಗಳನ್ನು ಭಾರಿ ಬೇಸರಕ್ಕೆ ದೂಡಿದೆ. ಕಾರಣ, ಟೆಸ್ಟ್​ ಮತ್ತು ಟಿ20 ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಕೊಹ್ಲಿ ಮತ್ತು ರೋಹಿತ್ ಶರ್ಮ, ಇಲ್ಲಿಯವರೆಗೆ ಟೀಮ್ ಇಂಡಿಯಾ ಪರ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ರೋಕೊ ಜೋಡಿ ಎಂದೇ ಖ್ಯಾತಿ ಪಡೆದಿರುವ ಇವರಿಬ್ಬರನ್ನು ಮೈದಾನದಲ್ಲಿ ನೋಡುವುದೇ ಒಂದು ರೋಮಾಂಚನ ಎನ್ನುವ ಫ್ಯಾನ್ಸ್​ಗೆ ಈ ವಿಷಯ ಭಾರಿ ಶಾಕ್ ನೀಡಿದೆ.

ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್​ಗಳನ್ನು ಕಲೆಹಾಕಿರುವ ಹಾಗೂ ಸ್ಟಾರ್​ ಬ್ಯಾಟ್ಸ್‌ಮನ್‌ಗಳ ಪೈಕಿ ಮುಂಚೂಣಿಯಲ್ಲಿರುವ ಕೊಹ್ಲಿ, ಇಲ್ಲಿಯವರೆಗೆ 37 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 59.83 ಸರಾಸರಿಯಲ್ಲಿ 1,795 ರನ್ ಗಳಿಸಿದ್ದಾರೆ. ಇನ್ನು, ಅವರ ವಿಶ್ವಕಪ್ ಟೂರ್ನಿ ದಾಖಲೆಗಳಲ್ಲಿ ಐದು ಶತಕ ಮತ್ತು 12 ಅರ್ಧಶತಕಗಳು ಸೇರಿದ್ದು, ಅತ್ಯಧಿಕ ಸ್ಕೋರ್ 117 ಆಗಿದೆ.

79 ಅರ್ಧಶತಕ

ಭಾರತದ ಮಾಜಿ ಕ್ಯಾಪ್ಟನ್​ ಆಗಿಯೂ ದಾಖಲೆ ಬರೆದಿರುವ ವಿರಾಟ್​, 302 ಏಕದಿನ ಇನ್ನಿಂಗ್ಸ್‌ಗಳಲ್ಲಿ 54 ಶತಕ ಮತ್ತು 79 ಅರ್ಧಶತಕಗಳನ್ನು ಗಳಿಸಿದ್ದಾರೆ. 58.59 ಸರಾಸರಿಯಲ್ಲಿ 14,941 ರನ್ ದಾಖಲಿಸಿದ್ದಾರೆ. ಅವರ ಗರಿಷ್ಠ ಏಕದಿನ ಸ್ಕೋರ್ 183 ಎಂಬುದು ಗಮನಾರ್ಹ. ಇನ್ನು, ಟಿ20 ವಿಶ್ವಕಪ್‌ನಲ್ಲಿ 35 ಪಂದ್ಯಗಳನ್ನಾಡಿರುವ ಕೊಹ್ಲಿ, 58.73 ಸರಾಸರಿಯಲ್ಲಿ 1,292 ರನ್ ಗಳಿಸುವ ಮೂಲಕ ಗಮನಾರ್ಹ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿದ್ದಾರೆ,(ಏಜೆನ್ಸೀಸ್).