ಬೆಂಗಳೂರು: ಹಿಂದಿನ ಸಂಘರ್ಷಗಳಿಂದಾಗಿ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಮುಖಾಮುಖಿ ಕುತೂಹಲ ಕೆರಳಿಸಿತ್ತು. ಇಬ್ಬರೂ ಮತ್ತೆ ಜಗಳವಾಡಿ ಪಂದ್ಯದ ಬಿಸಿ ಏರಿಸುವರೇ ಎಂಬ ಚರ್ಚೆಯೂ ಹುಟ್ಟಿತ್ತು. ಆದರೆ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಖಾಮುಖಿಯಲ್ಲಿ ಆಗಿದ್ದೆಲ್ಲವೂ ಉಲ್ಟಾಪಲ್ಟಾ!
ಪಂದ್ಯದಲ್ಲಿ ಆರ್ಸಿಬಿ ಇನಿಂಗ್ಸ್ನ 16ನೇ ಓವರ್ ಬಳಿಕ ನೀಡಿದ ಟೈಮ್ಔಟ್ ವೇಳೆ ಅಂಗಣಕ್ಕೆ ಆಗಮಿಸಿದ ಗಂಭೀರ್, ನಸುನಗುತ್ತಲೆ ಕೊಹ್ಲಿಯನ್ನು ಅಪ್ಪಿಕೊಂಡರು. ಈ ಮೂಲಕ ಇಬ್ಬರೂ ಹಿಂದಿನ ವೈಮನಸ್ಯ ಮರೆತಿರುವುದನ್ನು ಸ್ಪಷ್ಟಪಡಿಸಿದರು. ದೆಹಲಿಯವರಾದ ಇಬ್ಬರ ಮುಖದಲ್ಲೂ ನಗು ಬಹುಕಾಲ ನಂತರ ಭೇಟಿಯಾದ ಸ್ನೇಹಮಿಲನದಂತಿತ್ತು.
ಕೊಹ್ಲಿ ಸಿಕ್ಸರ್ ಕಿಂಗ್
ವಿರಾಟ್ ಕೊಹ್ಲಿ (241) ಆರ್ಸಿಬಿ ತಂಡದ ಪರ ಐಪಿಎಲ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್ ಎನಿಸಿದರು. ಮಾಜಿ ಆಟಗಾರ ಕ್ರಿಸ್ ಗೇಲ್ (239) ಅವರನ್ನು ಹಿಂದಿಕ್ಕಿದ ಕೊಹ್ಲಿ ಅಗ್ರಸ್ಥಾನಕ್ಕೇರಿದರು. ಎಬಿಡಿ ವಿಲಿಯರ್ಸ್ (238), ಗ್ಲೆನ್ ಮ್ಯಾಕ್ಸ್ವೆಲ್ (68) ನಂತರದ ಸ್ಥಾನದಲ್ಲಿದ್ದಾರೆ.
ಬೆಟ್ ಸೋತು ಆರ್ಸಿಬಿ ಜೆರ್ಸಿ ಧರಿಸಿದ ಸ್ಟೈರಿಸ್!
ಪಂಜಾಬ್ ಕಿಂಗ್ಸ್ ವಿರುದ್ಧದ ವೇಳೆ ಆರ್ಸಿಬಿ ತಂಡ ಗೆದ್ದರೆ ಮುಂದಿನ ಪಂದ್ಯದ ವೇಳೆ ಅದರ ಜೆರ್ಸಿ ಧರಿಸುವುದಾಗಿ, ಎಬಿ ಡಿವಿಲಿಯರ್ಸ್ ಜತೆ ಬೆಟ್ ಕಟ್ಟಿ ಸೋತಿದ್ದ ಕಿವೀಸ್ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್, ಶುಕ್ರವಾರ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ತನ್ನ ಮಾತಿನಂತೆ ನಡೆದುಕೊಂಡರು. ಆರ್ಸಿಬಿ ಸೋತಿದ್ದರೆ ಎಬಿಡಿ, ಸಿಎಸ್ಕೆ ಪಂದ್ಯ ಇರುವಾಗ ಅದರ ಜೆರ್ಸಿ ಧರಿಸಬೇಕೆಂದು ಟಿವಿ ವೀಕ್ಷಕವಿವರಣೆ ವೇಳೆ ಅವರಿಬ್ಬರ ನಡುವೆ ಬೆಟ್ಟಿಂಗ್ ನಡೆದಿತ್ತು.