ಕ್ರೀಡೆ

ಟೀಮ್ ಇಂಡಿಯಾಗೆ ಸಿಕ್ಕರು ಹೊಸ ಸಚಿನ್​, ಸೆಹ್ವಾಗ್​ ಮತ್ತು ಯುವರಾಜ್​! ಯಾರು ಆ 3 ಸ್ಟಾರ್​ ಆಟಗಾರರು?

ನವದೆಹಲಿ: ಪ್ರಸಕ್ತ ಅತಿಥೇಯ ಶ್ರೀಲಂಕಾ ತಂಡವನ್ನು 3-0 ಅಂತರದಿಂದ ಮಣಿಸಿದ ಟೀಮ್ ಇಂಡಿಯಾ, ಇದೀಗ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆದ್ದ ಟೀಮ್ ಇಂಡಿಯಾ ಕಡೆಯ ಮ್ಯಾಚ್​ನಲ್ಲಿ ಸೂಪರ್​ ಓವರ್​ನಲ್ಲಿ ರೋಚಕ ಜಯ ಸಾಧಿಸಿತು. ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸಿರೀಸ್​ ಅನ್ನು ಕೂಡ ವಶಪಡಿಸಿಕೊಳ್ಳಲು ಸಜ್ಜಾಗಿರುವ ಭಾರತಕ್ಕೆ ಇದೀಗ ಮೂವರು ದಿಗ್ಗಜ ಹಿರಿಯ ಕ್ರಿಕೆಟಿಗರು ತಂಡಕ್ಕೆ ರೀ-ಎಂಟ್ರಿ ಕೊಟ್ಟಿದ್ದಾರೆ! ಈ ಸಂಗತಿ ಸದ್ಯ ಕ್ರಿಕೆಟ್ ಪ್ರಿಯರನ್ನು ಅಕ್ಷರಶಃ ಬೆರಗಾಗಿಸಿದ್ದು, ಯಾರಪ್ಪ ಅದು ಎಂದು ಪ್ರಶ್ನಿಸುವಂತೆ ಮಾಡಿದೆ. ಇದೀಗ ಟೀಮ್ ಇಂಡಿಯಾಗೆ ವಾಪಾಸ್ ಬಂದಿರುವುದು ಸಚಿನ್ ತೆಂಡೂಲ್ಕರ್​, ವಿರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್​.

ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸುವ ಮೂಲಕ ಇಂದು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸ್ಟಾರ್​ ಕ್ರಿಕೆಟಿಗರು ಅಂದರೆ ಅದು ಮಾಸ್ಟರ್​ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್​, ವಿರೇಂದ್ರ ಸೆಹ್ವಾಗ್ ಮತ್ತು 6 ಸಿಕ್ಸರ್​ಗಳ​ ಸರದಾರ ಯುವರಾಜ್ ಸಿಂಗ್​. ವೈಟ್ ಬಾಲ್​ ಕ್ರಿಕೆಟ್​ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್​ ಮುಖೇನ ತಂಡಕ್ಕೆ ಆಸರೆಯಾಗಿದ್ದ ಈ ದಿಗ್ಗಜರಿಗೆ ಸರಿಸಾಟಿ ಯಾರು ಇಲ್ಲ ಎಂದೇ ಹೇಳಬಹುದು. ಸಚಿನ್​ ಅವರ ​ಲೆಗ್​-ಸ್ಪಿನ್​ ಮತ್ತು ಆಫ್​-ಸ್ಪಿನ್​ ದಾಳಿ ಎದುರಾಳಿಗಳ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗುತ್ತಿತ್ತು. ಕೇವಲ ಬ್ಯಾಟಿಂಗ್​ಗೆ ಮಾತ್ರ ಸೀಮಿತವಾಗದ ತೆಂಡೂಲ್ಕರ್ ಮತ್ತು ವೀರೂ, ಬಾಲ್​ನಲ್ಲಿಯೂ ಕಮಾಲ್ ಮಾಡುತ್ತಿದ್ದರು. ಇವರಿಗೆ ಸಾಲಿಗೆ ಸೇರಿದ ಮತ್ತೊಬ್ಬ ಸ್ಟಾರ್​ ಆಲ್​ರೌಂಡರ್​  ಯುವರಾಜ್ ಸಿಂಗ್.

2011ರ ಏಕದಿನ ವಿಶ್ವಕಪ್​ ಗೆದ್ದ ಭಾರತದ ತಂಡದಲ್ಲಿ ಈ ಮೂವರು ದಿಗ್ಗಜರು ಇದ್ದರು. ಗೇಮ್​-ಚೇಂಜರ್​ ಆಟಗಾರರನ್ನು ಹೋಲಿಸುವ ಮೂರು ಆಟಗಾರರು ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಇದ್ದಾರೆ ಎಂಬ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿಬಂದಿವೆ. ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಎಂದೂ ಬೌಲ್ ಮಾಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಊಹೆಗೂ ಮೀರಿದ ಪ್ರದರ್ಶನ ನೀಡಿದರು. ಇದನ್ನು ಗಮನದಲ್ಲಿಟ್ಟುಕೊಂಡು ಅಭಿಪ್ರಾಯ ಹೊರಹಾಕಿರುವ ನೆಟ್ಟಿಗರು, ರಿಯಾನ್ ಪರಾಗ್, ಸ್ಕೈ ಮತ್ತು ರಿಂಕು ಭಾರತದ ಹೊಸ ಸಚಿನ್, ಸೆಹ್ವಾಗ್ ಮತ್ತು ಯುವಿ ಎಂದು ಹೇಳಿದ್ದಾರೆ,(ಏಜೆನ್ಸೀಸ್).