ಕ್ರೀಡೆ

ಇಂದಿನಿಂದ ಮೂರನೇ ಟೆಸ್ಟ್​: ಭಾರತಕ್ಕೆ ಬ್ರಿಸ್ಬೇನ್​ನಲ್ಲಿ ಮತ್ತೆ ಜಯದ ಬಯಕೆ

ಬ್ರಿಸ್ಬೇನ್​: ಪರ್ತ್​ನಲ್ಲಿ ಅಮೋ ನಿರ್ವಹಣೆ ತೋರಿ ಗೆದ್ದ ಬಳಿಕ ಪಿಂಕ್​ ಬಾಲ್​ನಲ್ಲಿ ಆಡಿದ ಅಡಿಲೇಡ್​ ಟೆಸ್ಟ್​ನಲ್ಲಿ ಎರಡೂವರೆ ದಿನಗಳಲ್ಲೇ ಸೋತರೂ, ಬಾರ್ಡರ್​-ಗಾವಸ್ಕರ್​ ಟ್ರೋಫಿಯಲ್ಲಿ ಮತ್ತೆ ಪುಟಿದೆದ್ದು ಬರಲು ಭಾರತ ತಂಡ ಸಜ್ಜಾಗಿದೆ. 1-1 ಸಮಬಲದಲ್ಲಿರುವ 5 ಪಂದ್ಯಗಳ ಸರಣಿಯ 3ನೇ ಪಂದ್ಯ ಗಾಬಾದ ಪೇಸ್​-ಬೌನ್ಸಿ ಪಿಚ್​ನಲ್ಲಿ ಶನಿವಾರದಿಂದ ನಡೆಯಲಿದ್ದು, ಆತಿಥೇಯ ಆಸ್ಟ್ರೆಲಿಯಾ ವಿರುದ್ಧ 3 ವರ್ಷಗಳ ಹಿಂದೆ ಇಲ್ಲಿ ಆಡಿದ ಕೊನೇ ಟೆಸ್ಟ್​ ಪಂದ್ಯದಲ್ಲಿ ಗೆದ್ದ ಐತಿಹಾಸಿಕ ಸಾಧನೆಯನ್ನೇ ಪುನರಾವರ್ತಿಸುವ ಹಂಬಲ ರೋಹಿತ್​ ಶರ್ಮ ಬಳಗದ್ದಾಗಿದೆ.

ಪರ್ತ್​ ಗೆಲುವು ಭಾರತಕ್ಕೆ ಸರಣಿಯಲ್ಲಿ ಆರಂಭಿಕ ಮೇಲುಗೈ ತಂದುಕೊಟ್ಟಿದ್ದರೂ, ಅಡಿಲೇಡ್​ನಲ್ಲಿ ಸೋತಿರುವುದರಿಂದ ಇನ್ನುಳಿದ 3 ಟೆಸ್ಟ್​ಗಳು ಭಾರತದ ಪಾಲಿಗೆ ನಿರ್ಣಾಯಕ ಸವಾಲೆನಿಸಿದೆ. ಬಾರ್ಡರ್​-ಗಾವಸ್ಕರ್​ ಟ್ರೋಫಿ ಉಳಿಸಿಕೊಳ್ಳುವ ಜತೆಗೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಫೈನಲ್​ಗೇರುವ ನಿಟ್ಟಿನಲ್ಲೂ ಭಾರತಕ್ಕೆ ಉಳಿದ 3ರಲ್ಲಿ ಕನಿಷ್ಠ 2 ಗೆಲುವಿನ ಅಗತ್ಯವಿದೆ.

ಪರ್ತ್​ ಟೆಸ್ಟ್​ನ 2ನೇ ಇನಿಂಗ್ಸ್​ನಲ್ಲಿ ಸದೃಢ ಬ್ಯಾಟಿಂಗ್​ ಪ್ರದರ್ಶಿಸಿದ್ದ ಭಾರತ, ಅಡಿಲೇಡ್​ನ ಎರಡೂ ಇನಿಂಗ್ಸ್​ಗಳಲ್ಲಿ ನೀರಸ ನಿರ್ವಹಣೆ ತೋರಿತ್ತು. ಬ್ರಿಸ್ಬೇನ್​ನಲ್ಲಿ ಮತ್ತೆ ಭಾರತ ಅದೇ ಛಾತಿ ಮರುಕಳಿಸಬೇಕಾಗಿದೆ. ಪ್ರಮುಕವಾಗಿ ಅನುಭವಿಗಳಾದ ವಿರಾಟ್​ ಕೊಹ್ಲಿ ಮತ್ತು ನಾಯಕ ರೋಹಿತ್​ ಶರ್ಮ ದೊಡ್ಡ ಇನಿಂಗ್ಸ್​ ಆಡುವ ಅಗತ್ಯವಿದೆ. ರೋಹಿತ್​ ಕಳೆದ 6 ಟೆಸ್ಟ್​ಗಳಲ್ಲಿ ಒಂದೇ ಅರ್ಧಶತಕ ಬಾರಿಸಿ ರನ್​ಬರ ಎದುರಿಸುತ್ತಿದ್ದರೆ, ಕೊಹ್ಲಿ ಸ್ಥಿರ ನಿರ್ವಹಣೆ ಮುಂದುವರಿಸಬೇಕಾಗಿದೆ. ಪ್ರಮುಖವಾಗಿ ಕೆಟ್ಟ ಹೊಡೆತಗಳಿಗೆ ವಿಕೆಟ್​ ಒಪ್ಪಿಸುವ ಚಾಳಿಯನ್ನು ಕೊಹ್ಲಿ ಬಿಡಬೇಕಾಗಿದೆ.

ಯಶಸ್ವಿ ಜೈಸ್ವಾಲ್​, ಕೆಎಲ್​ ರಾಹುಲ್​ ಕೂಡ ಪರ್ತ್​ ಪಂದ್ಯದ ಲಯವನ್ನು ಮರುಕಳಿಸಬೇಕಿದೆ. ಶುಭಮಾನ್​ ಗಿಲ್​, ರಿಷಭ್​ ಪಂತ್​ಗೆ 2021ರ ಇನಿಂಗ್ಸ್​ ಸ್ಫೂರ್ತಿ ತುಂಬುವ ನಿರೀೆ ಇದ್ದರೆ, ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲೂ ಹೆಚ್ಚಿನ ಕೊಡುಗೆ ನೀಡಬೇಕಾಗಿದೆ. ವೇಗಿ ಜಸ್​ಪ್ರೀತ್​ ಬುಮ್ರಾಗೆ ಇತರ ವೇಗಿಗಳಿಂದ ಸಮರ್ಥ ಬೆಂಬಲ ಸಿಗಬೇಕಾಗಿದೆ. ಪ್ರಮುಖವಾಗಿ ಭಾರತ ಮೊದಲ ಇನಿಂಗ್ಸ್​ನಲ್ಲೇ ದೊಡ್ಡ ಮೊತ್ತ ಪೇರಿಸುವತ್ತ ಗಮನಹರಿಸಬೇಕಾಗಿದೆ.

ಆಸೀಸ್​ಗೆ ಸ್ಮಿತ್​, ಮೆಕ್​ಸ್ವೀನಿ ಚಿಂತೆ: ಅಡಿಲೇಡ್​ನಲ್ಲಿ ಮಾರ್ನಸ್​ ಲಬುಶೇನ್​, ಟ್ರಾವಿಸ್​ ಹೆಡ್​ ಮಿಂಚಿರುವ ನಡುವೆ ಆಸೀಸ್​ ಬ್ಯಾಟಿಂಗ್​ ವಿಭಾಗಕ್ಕೆ ಆರಂಭಿಕ ನಾಥನ್​ ಮೆಕ್​ಸ್ವೀನಿ ಮತ್ತು ಅನುಭವಿ ಸ್ಟೀವನ್​ ಸ್ಮಿತ್​ ವೈಲ್ಯ ಚಿಂತೆ ತಂದಿದೆ. ಕಳೆದೆರಡು ಟೆಸ್ಟ್​ಗಳಲ್ಲಿ ಸ್ಮಿತ್​ ಒಟ್ಟು 19 ರನ್​ ಮಾತ್ರ ಗಳಿಸಿದ್ದಾರೆ. ಅವರು ಶತಕ ಸಿಡಿಸಿ 24 ಇನಿಂಗ್ಸ್​ಗಳಾಗಿವೆ.

ಕೆಂಪು ಚೆಂಡಿನಲ್ಲಿ ಭಾರತ ಮೇಲುಗೈ

ಆಸ್ಟ್ರೆಲಿಯಾ ನೆಲದಲ್ಲಿ ಕುಕಾಬುರಾ ಕೆಂಪು ಚೆಂಡಿನಲ್ಲಿ ಆಡಿರುವ ಕಳೆದ 10 ಟೆಸ್ಟ್​ಗಳಲ್ಲಿ 5ರಲ್ಲಿ ಗೆದ್ದಿರುವ ಬಲಿಷ್ಠ ದಾಖಲೆ ಭಾರತ ತಂಡದ್ದಾಗಿದೆ. ಈ ಪೈಕಿ ಆಸೀಸ್​ 1ರಲ್ಲಿ ಮಾತ್ರ ಗೆದ್ದಿದ್ದರೆ, ಉಳಿದ 4 ಟೆಸ್ಟ್​ಗಳು ಡ್ರಾಗೊಂಡಿವೆ. ಇದು ಟೀಮ್​ ಇಂಡಿಯಾಗೆ ಮತ್ತೆ ಗೆಲುವಿನ ಹಳಿಗೆ ಮರಳಲು ಸ್ಫೂರ್ತಿ ತುಂಬುವ ಅಂಕಿ-ಅಂಶವೆನಿಸಿದೆ.

ಟೀಮ್​ ನ್ಯೂಸ್​:

ಭಾರತ: ಆಡುವ ಹನ್ನೊಂದರ ಬಳಗದ ಆಯ್ಕೆ ಬಗ್ಗೆ ಭಾರತ ಇನ್ನೂ ಗೊಂದಲದಲ್ಲಿದೆ. ಪ್ರಮುಖವಾಗಿ 3ನೇ ವೇಗಿ ಮತ್ತು ಏಕೈಕ ಸ್ಪಿನ್ನರ್​ ಆಯ್ಕೆ ಭಾರತಕ್ಕೆ ಸವಾಲೆನಿಸಿದೆ. ಆದರೆ ಹರ್ಷಿತ್​ ರಾಣಾ ಬದಲಿಗೆ ಆಕಾಶ್​ ದೀಪ್​ ಮತ್ತು ಆರ್​. ಅಶ್ವಿನ್​ ಬದಲಿಗೆ ವಾಷಿಂಗ್ಟನ್​ ಸುಂದರ್​ ಆಡುವ ನಿರೀೆ ಹೆಚ್ಚಿದೆ. ಇನ್ನು ನಾಯಕ ರೋಹಿತ್​ ಶರ್ಮ ಮತ್ತೆ ಆರಂಭಿಕರಾಗಿ ಆಡುವರೇ ಅಥವಾ ಮಧ್ಯಮ ಕ್ರಮಾಂಕದಲ್ಲೇ ಮುಂದುವರಿಯುವರೇ ಎಂಬ ಬಗ್ಗೆಯೂ ಕತೂಹಲವಿದೆ. ರೋಹಿತ್​ ಆರಂಭಿಕರಾಗಿ ಆಡಿದರೆ ಕೆಎಲ್​ ರಾಹುಲ್​ 6ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಲಿದ್ದಾರೆ.

ಆಸ್ಟ್ರೆಲಿಯಾ: ಆತಿಥೇಯ ಆಸೀಸ್​ ಎಂದಿನಂತೆ ಪಂದ್ಯಕ್ಕೆ ಮುನ್ನಾದಿನವೇ ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಿದ್ದು, ವೇಗಿ ಜೋಶ್​ ಹ್ಯಾಸಲ್​ವುಡ್​ ಫಿಟ್​ ಆಗಿರುವುದರಿಂದ ಮರಳಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸ್ಕಾಟ್​ ಬೋಲ್ಯಾಂಡ್​ ಸ್ಥಾನ ಬಿಟ್ಟುಕೊಡಲಿದ್ದಾರೆ. ಅಡಿಲೇಡ್​ನಲ್ಲಿ ಉತ್ತಮ ದಾಳಿ ನಡೆಸಿದ್ದರೂ ಬೋಲ್ಯಾಂಡ್​ರನ್ನು ಕೈಬಿಡುತ್ತಿರುವುದು ಕಠಿಣ ನಿರ್ಧಾರ. ಆದರೆ ಸರಣಿಯಲ್ಲಿ ಮತ್ತೆ ಅವರಿಗೆ ಅವಕಾಶ ಲಭಿಸಬಹುದು ಎಂದು ನಾಯಕ ಪ್ಯಾಟ್​ ಕಮ್ಮಿನ್ಸ್​ ತಿಳಿಸಿದ್ದಾರೆ.

*ಆರಂಭ: ಬೆಳಗ್ಗೆ 5.50

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

*ಬ್ರಿಸ್ಬೇನ್​ ಮುಖಾಮುಖಿ: 7

ಆಸ್ಟ್ರೆಲಿಯಾ: 5

ಭಾರತ: 1

ಡ್ರಾ: 1

*ಪ್ರತಿ ದಿನದಾಟ ಹೀಗಿರಲಿದೆ

ಮೊದಲ ಅವಧಿ: ಬೆಳಗ್ಗೆ 5.50-7.50

2ನೇ ಅವಧಿ: ಬೆಳಗ್ಗೆ 8.30-10.30

3ನೇ ಅವಧಿ: ಬೆಳಗ್ಗೆ 10.30-1.20

ಗಾಬಾದಲ್ಲಿ ತಗ್ಗಿದೆ ಆಸೀಸ್​ ಪ್ರಾಬಲ್ಯ?

ರಿಷಭ್​ ಪಂತ್​ ಸಾಹಸದಿಂದ ಭಾರತ ತಂಡ 2021ರಲ್ಲಿ ಗಾಬಾದಲ್ಲಿ ಗೆಲ್ಲುವವರೆಗೆ ಆಸೀಸ್​ ತಂಡ ಇಲ್ಲಿ 32 ವರ್ಷಗಳ ಕಾಲ ಸೋಲು ಕಂಡಿರಲಿಲ್ಲ. ನಂತರ ಹಾಲಿ ವರ್ಷದ ಆರಂಭದಲ್ಲೂ ಆಸೀಸ್​ ತಂಡ ವಿಂಡೀಸ್​ ವೇಗಿ ಶಮರ್​ ಜೋಸ್​ೆ ದಾಳಿಗೆ ತತ್ತರಿಸಿ ಸೋತಿತ್ತು. ಅಂದರೆ ಬ್ರಿಸ್ಬೇನ್​ನಲ್ಲಿ ಆಡಿದ ಕಳೆದ 4 ಟೆಸ್ಟ್​ಗಳಲ್ಲಿ 2ರಲ್ಲಿ ಸೋತಂತಾಗಿದೆ. ಈ ನಡುವೆ 2022ರ ಡಿಸೆಂಬರ್​ನಲ್ಲಿ ದಣ ಆಫ್ರಿಕಾ ವಿರುದ್ಧ ಇಲ್ಲಿ ಎರಡೇ ದಿನಗಳಲ್ಲಿ ಗೆದ್ದಿತ್ತು. 2021ರಲ್ಲಿ ಇಲ್ಲಿ ಗೆದ್ದ ಭಾರತ ತಂಡದ ನಾಲ್ವರು ಆಟಗಾರರು (ರೋಹಿತ್​, ಗಿಲ್​, ಪಂತ್​, ಸಿರಾಜ್​) ಈ ಸಲವೂ ಆಡುವುದು ಖಚಿತವೆನಿಸಿದೆ. ವಾಷಿಂಗ್ಟನ್​ ಕೂಡ ಕಣಕ್ಕಿಳಿದರೆ ಈ ಸಂಖ್ಯೆ 5ಕ್ಕೇರಲಿದೆ.

*ತಂಡ ಈಗ ಉತ್ತಮ ಮೂಡ್​ನಲ್ಲಿದೆ. ನಿನ್ನೆ ನಾವೆಲ್ಲರೂ ಜತೆಯಾಗಿ ಡಿನ್ನರ್​ಗೆ ಹೋಗಿದ್ದೆವು. ಅಡಿಲೇಡ್​ನಲ್ಲಿ ನಾವು ಉತ್ತಮವಾಗಿ ಆಡಲಿಲ್ಲ. ಆದರೆ ಸರಣಿ ಈಗಲೂ ಜೀವಂತವಾಗಿದೆ ಮತ್ತು ಈಗ ಇದು 3 ಪಂದ್ಯಗಳ ಸರಣಿಯಂತಿದೆ. ನಾವು ಬ್ರಿಸ್ಬೇನ್​ನಲ್ಲಿ ಗೆದ್ದರೆ ಮೆಲ್ಬೋರ್ನ್​ ಮತ್ತು ಸಿಡ್ನಿಯಲ್ಲೂ ಮೇಲುಗೈ ಸಾಧಿಸಬಹುದು.

> ಶುಭಮಾನ್​ ಗಿಲ್​

ತಿಳಿಯಾದ ಹಸಿರು ಪಿಚ್​

ಪಂದ್ಯಕ್ಕೆ ಮುನ್ನಾದಿನವಾದ ಶುಕ್ರವಾರ ಗಾಬಾ ಪಿಚ್​ ಮೇಲಿನ ಹಸಿರು ಹುಲ್ಲು ಸಾಕಷ್ಟು ಕಡಿಮೆಯಾಗಿದೆ. ಇದರಿಂದ ಪಿಚ್​ನ ಹಸಿರು ಬಣ್ಣವೂ ತಿಳಿಯಾಗಿದೆ. 2022ರಲ್ಲಿ ದಣ ಆಫ್ರಿಕಾ ವಿರುದ್ಧ ಇಲ್ಲಿ ಎರಡೇ ದಿನಗಳಲ್ಲಿ ಗೆದ್ದಿದ್ದ ಆಸೀಸ್​ ನಾಯಕ ಪ್ಯಾಟ್​ ಕಮ್ಮಿನ್ಸ್​, ಈ ಬಾರಿ ಪಿಚ್​ ಆಗಿನಷ್ಟು ಹಸಿರಾಗಿಲ್ಲ ಎಂದಿದ್ದಾರೆ. ಪಿಚ್​ ಎಂದಿನಂತೆ ವೇಗದ ಬೌಲಿಂಗ್​ ಸ್ನೇಹಿಯಾಗಿಯೇ ಇರಲಿದೆ. ಪಂದ್ಯದ ವೇಳೆ ಮಳೆ ಸುರಿಯುವ ಭೀತಿ ಇದ್ದು, ಮಳೆ ಬಂದರೆ ಪಿಚ್​ ವೇಗಿಗಳಿಗೆ ಇನ್ನಷ್ಟು ಹೆಚ್ಚು ನೆರವಾಗಲಿದೆ.

*100: ವಿರಾಟ್​ ಕೊಹ್ಲಿ ಈ ಪಂದ್ಯದೊಂದಿಗೆ ಆಸ್ಟ್ರೆಲಿಯಾ ವಿರುದ್ಧ 100 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ಆಡಿದ 2ನೇ ಭಾರತೀಯ ಎನಿಸಲಿದ್ದಾರೆ. ಸಚಿನ್​ ತೆಂಡುಲ್ಕರ್​ (110) ಮೊದಲಿಗ.