ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಈಗಾಗಲೇ ತಯಾರಿ ಆರಂಭಿಸಿರುವ ಪಿಸಿಬಿ ಹಾಗೂ ಐಸಿಸಿ ಟೂರ್ನಿಯಲ್ಲಿ ಯಾವುದೇ ಲೋಪದೋಷ ಬಾರದಂತೆ ನಡೆಸಲು ಸಜ್ಜಾಗಿದೆ. ಭಾರತ ತಂಡವು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಡುತ್ತಿದ್ದು, ಸಕಲ ತಯಾರಿ ಮಾಡಿಕೊಳ್ಳಲಾಗಿದೆ.
ಇನ್ನೂ ಟೂರ್ನಿಗೆ (Champions Trophy) ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದ್ದು, ಬಿಸಿಸಿಐ ಮತ್ತೊಮ್ಮೆ ತನ್ನ ಮೇಲುಗೈ ಸಾಧಿಸಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅಲ್ಲಿನ ಕ್ರಿಕೆಟ್ ಮಂಡಳಿ ಹಾಗೂ ಮಾಜಿ ಆಟಗಾರರು ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ, ಆ ನಿರೀಕ್ಷೆ ಎಲ್ಲವೂ ಉಲ್ಟಾ ಆಗಿದ್ದು, ಪಿಸಿಬಿ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಭಾರತ ಮೂಲದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ (Danish Kaneria) ಮಾತನಾಡಿದ್ದು, ಪಿಸಬಿ ವಿರುದ್ಧ ಹೌಹಾರಿದ್ದಾರೆ.
ಐಎಎನ್ಸ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಡ್ಯಾನಿಶ್, ಅವರು ನಮ್ಮ ಕೈಗೆ ಲಾಲಿಪಾಪ್ ಕೊಟ್ಟು ಗೆಲುವನ್ನು ಸಾಧಿಸಿದ್ದಾರೆ. 2028ರಲ್ಲಿ ನಡೆಯಲಿರುವ ಮಹಿಳೆಯರ ವಿಶ್ವಕಪ್ ಆತಿಥ್ಯವನ್ನು ನಮಗೆ ನೀಡಿದ್ದಾರೆ. ಇಲ್ಲಿನ ಜನರು ಹಾಗೂ ಕ್ರಿಕೆಟ್ ಮಂಡಳಿಯವರು ನಾವು ಹೋರಾಡಿ ಗೆದ್ದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇಲ್ಲಿನ ಜನರು ಅನಕ್ಷರಸ್ಥರು ಎಂದು ಯಾರಿಗೂ ತಿಳಿದಿಲ್ಲ. ಹೈಬ್ರಿಡ್ ಮಾದರಿಗೆ ಸಂಬಂಧಿಸಿದಂತೆ ನಮಗೆ ಬೇರೆ ದಿಕ್ಕಿಲ್ಲದ ಕಾರಣ ಒಪ್ಪಿಕೊಂಡಿದ್ದೇವೆ.
ದೇಶವು ಪ್ರಸ್ತುತ ಅಸ್ಥಿರ ಪರಿಸ್ಥಿತಿ ಎದುರಿಸುತ್ತಿದ್ದು, ಪಾಕಿಸ್ತಾನಕ್ಕೆ ಬರುವ ಬೇರೆ ತಂಡಗಳ ಮೇಲೂ ಏನಾದರೂ ಆದಲ್ಲಿ ಸಂಪೂರ್ಣ ಟೂರ್ನಿ ಸ್ಥಳಾಂತರಗೊಳ್ಳುತ್ತದೆ. ಪ್ರತಿಯೊಬ್ಬರಿಗೂ ಕಾಳಜಿ ಇದ್ದು, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸುತ್ತಿರುವುದು ಉತ್ತಮ ನಡೆಯಾಗಿದೆ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ಪೈನಲ್ ತಲುಪಿದಲ್ಲಿ ಪಂದ್ಯವನ್ನು ದುಬೈನಲ್ಲಿ ಆಡಿಸಲಾಗುತ್ತದೆ. ದುಬೈನಲ್ಲಿ ಭಾರತದ ಜೊತೆ ಆಡಲು ತೊಂದರೆ ಇಲ್ಲ ಎಂದು ಹೇಳುವವರು ಅವರ ನೆಲದಲ್ಲಿ ಆಡಲು ಯಾಕೆ ನೀವು ಒಪ್ಪಿಗೆ ಸೂಚಿಸಿಲ್ಲ ಎಂದು ಭಾರತ ಮೂಲದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ಪಿಸಿಬಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.