Abhishek Sharma: ನಿನ್ನೆ (ಏಪ್ರಿಲ್ 12) ರಾತ್ರಿ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ, ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದ ಅಭಿಶೇಕ್, ಒಟ್ಟು 55 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ 141 ರನ್ ಗಳಿಸಿ ಐಪಿಎಲ್ನಲ್ಲಿ ತಮ್ಮ ಹೆಸರಿಗೆ ದಾಖಲೆಯನ್ನು ಸೇರ್ಪಡೆಗೊಳಿಸಿದರು.
ಇದನ್ನೂ ಓದಿ: ನನ್ನ ತಾಯಿಗೆ ನನ್ನ ಅಜ್ಜಿ-ತಾತ ಅಂದ್ರೆ ಇಷ್ಟವಿಲ್ಲ… ವಿದ್ಯಾರ್ಥಿಯ ಉತ್ತರ ಪತ್ರಿಕೆ ಕಂಡು ಟೀಚರ್ ಶಾಕ್! Exam Paper
ಐಪಿಎಲ್ ಇತಿಹಾಸದಲ್ಲಿ ಐದನೇ ಅತಿ ವೇಗದ ಶತಕ ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಭಿಷೇಕ್, ತಮ್ಮ ತಂಡದ ಮಾಲೀಕರಾದ ಕಾವ್ಯ ಮಾರನ್, ಪೋಷಕರು ಮತ್ತು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಂದ ಮೆಚ್ಚುಗೆಗಳ ಮಹಾಪೂರವನ್ನೇ ಸ್ವೀಕರಿಸಿದರು. ಇನ್ನು ಪಂದ್ಯ ಮುಗಿದ ಬಳಿಕ ತನ್ನ ಸಂತಸವನ್ನು ಮಾತಿನಲ್ಲಿ ಹಂಚಿಕೊಂಡ ಅಭಿಷೇಕ್, "ಕಳೆದ ನಾಲ್ಕು ದಿನಗಳಿಂದ ವಿಪರೀತ ಜ್ವರ ನನ್ನನ್ನು ಕಾಡುತ್ತಿತ್ತು. ಈ ಸಮಯದಲ್ಲಿ ನನಗೆ ಯುವರಾಜ್ ಸಿಂಗ್ ಮತ್ತು ಎಂಐ ಬ್ಯಾಟರ್ ಸೂರ್ಯಕುಮಾರ್ ಯಾದವ್ ಪ್ರೋತ್ಸಾಹದ ಮಾತುಗಳನ್ನು ತುಂಬಿದರು" ಎಂದರು.
"ನಿಜ ಹೇಳಬೇಕೆಂದರೆ, ಕಳೆದ ನಾಲ್ಕು ದಿನಗಳಿಂದ ನಾನು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೆ. ನನಗೆ ಜ್ವರವಿತ್ತು. ಆಗ ಯುವರಾಜ್ ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ನನಗೆ ಉತ್ತಮ ಪ್ರೋತ್ಸಾಹ ನೀಡಿದರು. ಆಗಾಗ್ಗೆ ಫೋನ್ ಮಾಡುತ್ತಲೇ ಇದ್ದರು. ನಾನು ಹೇಗಿದ್ದೀನಿ ಎಂದು ಪರಿಶೀಲಿಸುತ್ತಲೇ ಇದ್ದರು. ಇವರಿಬ್ಬರು ನನ್ನ ಮೇಲೆ ಭಾರೀ ನಂಬಿಕೆ ಇಟ್ಟಿದ್ದಾರೆ" ಎಂದರು.
"ಹಲವೊಮ್ಮೆ ನನ್ನ ಮೇಲೆಯೇ ನನಗೆ ಅನುಮಾನ ಮೂಡಿದೆ. ಆದರೆ, ಈ ಇಬ್ಬರು ಮಾತ್ರ ಎಂದಿಗೂ ನನ್ನ ಮೇಲೆ ಅನುಮಾನ ತೋರಿಲ್ಲ. ಅವರು ಹಾಗೆ ಮಾಡಿದಿದ್ದರೆ ಖಂಡಿತ ನಾನು ಕುಗ್ಗುತ್ತಿದ್ದೆ. ಈ ನಂಬಿಕೆ, ಪ್ರೀತಿ ತುಂಬಾ ಮುಖ್ಯವಾದದ್ದು. ಈ ರೀತಿ ಯಾರಾದರೂ ನಿಮ್ಮಲ್ಲಿ ನಂಬಿಕೆಯಿಟ್ಟಾಗ, ನಿಮಗೆ ನಿಮ್ಮ ಮೇಲೆ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ. ಅಸಲಿಗೆ ಈ ಒಂದು ಇನ್ನಿಂಗ್ಸ್ಗಾಗಿ ಕಾಯುತ್ತಿದ್ದೆ. ಅದು ಇಂದಿನ ಪಂದ್ಯದಲ್ಲಿ ಲಭಿಸಿತು" ಎಂದು ಅಭಿಷೇಕ್ ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ; ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೀಗೇಳಿದ್ದೇಕೆ? | Waqf Violence
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 245 ರನ್ ಗಳಿಸಿತು. ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ (82 ರನ್ 36 ಎಸೆತ, 6 ಬೌಂಡರಿ, 6 ಸಿಕ್ಸರ್), ಪ್ರಿಯಾಂಶ್ ಆರ್ಯ (36 ರನ್, 13 ಎಸೆತ, 2 ಬೌಂಡರಿ, 4 ಸಿಕ್ಸರ್) ಪ್ರಭ್ ಸಿಮ್ರಾನ್ ಸಿಂಗ್ (42 ರನ್ 23 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಮಾರ್ಕ್ ಸ್ಟೊಯಿನಿಸ್ (ಔಟಾಗದೆ 34 ರನ್, 11 ಎಸೆತ, 1 ಬೌಂಡರಿ, 4 ಸಿಕ್ಸರ್) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ತಂಡವು ಬೃಹತ್ ಮೊತ್ತವನ್ನು ಕಲೆಹಾಕಿತು. ಎಸ್‌ಆರ್‌ಎಚ್ ಬೌಲರ್‌ಗಳಲ್ಲಿ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರೆ, ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು.
ಬಳಿಕ ಪಂಜಾಬ್ ನೀಡಿದ ಗುರಿ ಬೆನ್ನತ್ತಿದ ಎಸ್‌ಆರ್‌ಎಚ್ ಪರ ಅಭಿಷೇಕ್ ಶರ್ಮಾ (141 ರನ್, 55 ಎಸೆತ, 14 ಬೌಂಡರಿ, 10 ಸಿಕ್ಸರ್) ವಿಧ್ವಂಸಕ ಶತಕ ಗಳಿಸಿದರು. ಟ್ರಾವಿಸ್ ಹೆಡ್ (66 ರನ್, 37 ಎಸೆತ, 9 ಬೌಂಡರಿ, 3 ಸಿಕ್ಸರ್) ನೆರವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 18.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಸತತ ಸೋಲುಗಳಿಂದ ಕಂಗೆಟ್ಟಿದ ಎಸ್‌ಆರ್‌ಎಚ್ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. (ಏಜೆನ್ಸೀಸ್)