ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ಐಪಿಎಲ್ 2025ರ 18ನೇ ಆವೃತ್ತಿ ಕುರಿತಂತೆ ಭಾರೀ ಚರ್ಚೆಗಳು ಭುಗಿಲೆದ್ದಿದ್ದು, ಮುಂಬರುವ ಸೀಸನ್ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮ, ಕೆ.ಎಲ್. ರಾಹುಲ್, ರಿಷಭ್ ಪಂತ್ ಈಗಿರುವ ತಮ್ಮ ಫ್ರಾಂಚೈಸಿ ಬಿಟ್ಟು ಹೊಸ ತಂಡ ಸೇರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿಗಳು ಕ್ರಿಕೆಟ್ ಪ್ರಿಯರನ್ನು ಗೊಂದಲಕ್ಕೆ ದೂಡಿದೆ. ಇದೆಲ್ಲದರ ಮಧ್ಯೆ ಮುಂದಿನ ತಿಂಗಳಲ್ಲಿ ನಡೆಯುವ ಹರಾಜು ಪ್ರಕ್ರಿಯೆ ಮೇಲೆ ಸದ್ಯ ಕ್ರೀಡಾಭಿಮಾನಿಗಳ ಕಣ್ಣು ಬಿದ್ದಿದ್ದು, ಆಟಗಾರರು ಯಾರ ಮಾಲೀಕತ್ವದ ತಂಡ ಸೇರಲಿದ್ದಾರೆ? ಎಷ್ಟು ಕೋಟಿ ರೂ.ಗೆ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಆಗಿ, ಆಕ್ಷನ್ ಕ್ರೇಜ್ ಹೆಚ್ಚಿಸುತ್ತಾರೆ ಎಂಬುದೇ ಕುತೂಹಲಕಾರಿ.
ಸದ್ಯ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಳ್ಳಲು ಎದುರುನೋಡುತ್ತಿರುವ ಸಿಎಸ್ಕೆ ಮ್ಯಾನೇಜ್ಮೆಂಟ್ ಒಂದೆಡೆಯಾದರೆ, ಯಶಸ್ವಿ ನಾಯಕ ರೋಹಿತ್ ಶರ್ಮರನ್ನು ಕಳೆದುಕೊಳ್ಳಲು ಮುಂಬೈ ಇಂಡಿಯನ್ಸ್ ಸಜ್ಜಾಗಿದೆಯೇ ಎಂಬುದು ಮತ್ತೊಂದೆಡೆ. ಇನ್ನು ಐಪಿಎಲ್ನ ಹೆಸರಾಂತ ಫ್ರಾಂಚೈಸಿಗಳ ಪೈಕಿ ಮಹಿಳೆಯರ ಮಾಲೀಕತ್ವದಲ್ಲಿರುವ ತಂಡಗಳು ಎಂದರೆ ಅದು ಬಾಲಿವುಡ್ ನಟಿ ಪ್ರೀತಿ ಜಿಂಟಾ ನೇತೃತ್ವದ ಪಂಜಾಬ್ ಕಿಂಗ್ಸ್ ಮತ್ತು ಕಾವ್ಯ ಮಾರನ್ ಓನರ್ಶಿಪ್ನಲ್ಲಿರುವ ಸನ್ರೈಸರ್ಸ್ ಹೈದರಾಬಾದ್. ಸ್ಟಾರ್ ಆಟಗಾರರ ಮೇಲೆ ಸನ್ರೈಸರ್ಸ್ ಇಟ್ಟಿರುವ ಗುರಿಗಿಂತ ಪಂಜಾಬ್ ಹಾಕಿರುವ ಗಾಳ ಬಲು ಜೋರಾಗಿ ಸದ್ದು ಮಾಡುತ್ತಿರುವುದೇ ಇಲ್ಲಿ ಗಮನಿಸಬೇಕಾದ ಅಂಶ.
ತನ್ನ ತಂಡಕ್ಕೆ ಸ್ಟಾರ್ ಪ್ಲೇಯರ್ಸ್ ತರುವುದರ ಜತೆಗೆ ಕ್ಯಾಪ್ಟನ್ಶಿಪ್ ಕೂಡ ಅಚ್ಚುಕಟ್ಟಾಗಿ ನಿರ್ವಹಿಸುವಂತ ಆಟಗಾರನ ಮೇಲೆ ಪ್ರೀತಿ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಅಸಲಿಗೆ ಯಾರು ಆ ಆಟಗಾರರು ಎಂಬ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ.
1. ರೋಹಿತ್ ಶರ್ಮ
ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ಸ್ ಆಗಿ ಮಾಡಿದ ಹಿರಿಮೆ ರೋಹಿತ್ ಶರ್ಮಗೆ ಸೇರುತ್ತದೆ. ಇಡೀ ತಂಡಕ್ಕೆ ಆಸರೆಯಾಗಿರುವ ರೋಹಿತ್, ಅಬ್ಬರದ ಬ್ಯಾಟಿಂಗ್ ಜತೆಗೆ ನಾಯಕತ್ವವನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದು ಒಬ್ಬ ಆಟಗಾರನ ಸಾಮರ್ಥ್ಯ ಹಾಗೂ ಅವರ ಅವಶ್ಯಕತೆ ತಂಡಕ್ಕೆ ಎಷ್ಟಿದೆ ಎಂಬುದನ್ನು ಒತ್ತಿ ಹೇಳುತ್ತದೆ. ಸದ್ಯ ಈ ವಿಷಯಗಳನ್ನು ಅರಿತಿರುವ ಪ್ರೀತಿ, ಈ ಬಾರಿ ರೋಹಿತ್ರನ್ನು ತಮ್ಮ ತಂಡಕ್ಕೆ ಕರೆದುಕೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತಿದೆ.
2. ಸೂರ್ಯಕುಮಾರ್ ಯಾದವ್
ಭಾರತದ ಮಿಸ್ಟರ್ 360 ಡಿಗ್ರಿ ಆಟಗಾರ ಎಂದೇ ಜನಪ್ರಿಯತೆ ಪಡೆದುಕೊಂಡಿರುವ ಸೂರ್ಯಕುಮಾರ್ ಯಾದವ್, ತಮ್ಮ ವಿಶೇಷ ಬ್ಯಾಟಿಂಗ್ ವೈಖರಿಯಿಂದಲೇ ಸ್ಟೇಡಿಯಂನಲ್ಲಿರುವ ಕ್ರಿಕೆಟ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಾರೆ. ಎದುರಾಳಿಯಿಂದ ಬರುವ ಬಾಲ್ ಯಾವ ವೇಗದಲ್ಲಾದರೂ ಇರಲಿ ಅದನ್ನು ತಮಗೆ ಹೇಗೇ ಬೇಕೋ ಹಾಗೆ ಕನ್ವರ್ಟ್ ಮಾಡಿಕೊಂಡು ಸ್ಟೇಡಿಯಂ ಸುತ್ತಮುತ್ತ ಬಾರಿಸುವ ಸ್ಟಾರ್ ಆಟಗಾರ ಸೂರ್ಯ. ಸದ್ಯ ಮಿ. 360 ಅವರ ಬ್ಯಾಟಿಂಗ್ ಸಾಮರ್ಥ್ಯ ಪಂಜಾಬ್ನ ಬ್ಯಾಟಿಂಗ್ ಲೈನ್ ಅನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳು ಹೆಚ್ಚಿವೆ.
3. ಡೇವಿಡ್ ವಾರ್ನರ್
ಕ್ಯಾಪ್ಟನ್ ಆಗಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಡೇವಿಡ್ ವಾರ್ನರ್, ಆರಂಭಿಕ ಆಟಗಾರನಾಗಿ ಹಾಗೂ ನಾಯಕನಾಗಿ ತಂಡದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಬಲ್ಲರು. ಅದಕ್ಕೆ ಈ ಹಿಂದೆ ಅವರು ಆಡಿರುವ ಪಂದ್ಯಗಳೇ ಸಾಕ್ಷಿ. ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ಪರ ಮೈದಾನಕ್ಕಿಳಿಯುತ್ತಿರುವ ವಾರ್ನರ್, ತಮ್ಮ ಚಾಣಕ್ಷತನ ಬ್ಯಾಟಿಂಗ್ನಿಂದಲೇ ಎದುರಾಳಿ ತಂಡದ ಬೌಲರ್ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿರುವುದು ವಿಶೇಷ. ಒಟ್ಟಾರೆ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿರುವ ಪ್ರೀತಿ ಜಿಂಟಾ, ಮುಂದಿನ ತಿಂಗಳಲ್ಲಿ ನಡೆಯುವ ಆಕ್ಷನ್ ಪ್ರಕ್ರಿಯೆಯಲ್ಲಿ ಈ ಮೂವರು ಸ್ಟಾರ್ ಆಟಗಾರರನ್ನು ತಮ್ಮ ಫ್ರಾಂಚೈಸಿಗಾಗಿ ಖರೀದಿ ಮಾಡ್ತಾರಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).