ಕ್ರೀಡೆ

ನಾಯಕನ ಸ್ಥಾನಕ್ಕೆ ಬುಮ್ರಾ ಸರಿಯಲ್ಲ! ಇವರಿಬ್ಬರ ಪೈಕಿ ಯಾರೇ ಟೆಸ್ಟ್ ಕ್ಯಾಪ್ಟನ್ ಆದ್ರೂ ಉತ್ತಮವೇ: ಕೈಫ್​ | Test Captain

ಮೋಹನ್​ ಶೆಟ್ಟಿ

Test Captain: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ರೋಹಿತ್ ಶರ್ಮ ಪಡೆ ಹೀನಾಯ ಸೋಲು ಕಂಡಿತು. ಆತಿಥೇಯರ ವಿರುದ್ಧ ಸರಣಿ ಗೆಲ್ಲುವಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ ಸೋಲಿಗೆ ದಿಗ್ಗಜ ಆಟಗಾರರ ಕಳಪೆ ಪ್ರದರ್ಶನ ಎಂದು ಒಂದು ವರ್ಗ ಹೇಳಿದರೆ, ಮತ್ತೊಂದು ವರ್ಗ ತಂಡದ ನಾಯಕ ರೋಹಿತ್ ಶರ್ಮರ ಅತ್ಯಂತ ಕಳಪೆ ಪ್ರದರ್ಶನ ಹಾಗೂ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ ರೀತಿ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ದೂರಿದ್ದಾರೆ. ಸದ್ಯ ಈ ವಿಷಯ ಕ್ರಿಕೆಟ್​ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಾಯಕನ ಜವಾಬ್ದಾರಿ ಹಸ್ತಾಂತರಿಸಿ

ಆಸೀಸ್​ ವಿರುದ್ಧದ ಐದನೇ ಹಾಗೂ ಕೊನೆ ಪಂದ್ಯದಲ್ಲಿ ಆಡಲು ಇಚ್ಛಿಸದ ರೋಹಿತ್​ ಬದಲಿಗೆ ಜಸ್ಪ್ರೀತ್ ಬುಮ್ರಾಗೆ ತಂಡದ ನಾಯಕನ ಜವಾಬ್ದಾರಿ ಕೊಟ್ಟು ಪಂದ್ಯ ಆಡಿಸಲಾಯಿತು. ಮೊದಲ ಟೆಸ್ಟ್​ ಮ್ಯಾಚ್​ನಲ್ಲಿ ತಂಡವನ್ನು ಗೆಲುವಿನೆಡೆಗೆ ತಲುಪಿಸಿದ್ದ ಬುಮ್ರಾ, ಕಡೆಯ ಟೆಸ್ಟ್​ನಲ್ಲಿ ಗೆಲುವು ತಂದುಕೊಡಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದ್ರೆ, ಅಂತಿಮವಾಗಿ ಅದು ಹುಸಿಯಾಯಿತು. ಸದ್ಯ ರೋಹಿತ್​ ನಿವೃತ್ತಿ ಜತೆಗೆ ಟೆಸ್ಟ್ ಕ್ಯಾಪ್ಟನ್ಸಿ ಬಗ್ಗೆ ಟೀಕೆ ಮಾಡುತ್ತಿರುವ ಹಲವು ಮಾಜಿ ಹಿರಿಯ ಆಟಗಾರರು, ರೋಹಿತ್ ಬದಲಿಗೆ ಯುವ ಆಟಗಾರರಿಗೆ ನಾಯಕನ ಜವಾಬ್ದಾರಿ ಹಸ್ತಾಂತರಿಸಿ ಇಲ್ಲವೇ ವಿರಾಟ್​ಗೆ ನೀಡಿ ಎಂಬ ಅಭಿಪ್ರಾಯ, ಅನಿಸಿಕೆಗಳನ್ನು ಹೊರಹಾಕಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಭಾರತಕ್ಕೆ ಬುಮ್ರಾ, ರೋಹಿತ್​ ಅಲ್ಲದೇ ಈ ಇಬ್ಬರಿಗೆ ಕ್ಯಾಪ್ಟನ್ಸಿ ನಿಭಾಯಿಸುವ ಶಕ್ತಿಯಿದೆ ಎಂದು ಅಭಿಪ್ರಾಯಿಸಿದ್ದಾರೆ.

ಸಾಕಷ್ಟು ಒತ್ತಡ

"ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕನ ಸ್ಥಾನ ನೀಡುವುದು ಸೂಕ್ತವಲ್ಲ. ಏಕೆಂದರೆ, ಬುಮ್ರಾ ತಂಡಕ್ಕಾಗಿ ತಮ್ಮ ಎಲ್ಲಾ ಪ್ರಯತ್ನ ಮೀರಿ ಬೆಸ್ಟ್​ ಕೊಡುವ ಏಕೈಕ ಬೌಲರ್. ಹೀಗಿರುವಾಗ ಅವರಿಗೆ ಕ್ಯಾಪ್ಟನ್ಸಿ ಜವಾಬ್ದಾರಿ ನೀಡುವುದು ಹೆಚ್ಚಿನ ಹೊರೆ ಹೊರಿಸಿದಂತೆ. ಬೌಲಿಂಗ್​ನಲ್ಲೇ ಅವರಿಗೆ ಸಾಕಷ್ಟು ಒತ್ತಡವಿರುತ್ತದೆ. ಇದರೊಟ್ಟಿಗೆ ಕ್ಯಾಪ್ಟನ್ಸಿ ಸೇರಿದರೆ ಅದು ದುಪ್ಪಟ್ಟಾಗುತ್ತದೆ. ಬುಮ್ರಾ ಟೆಸ್ಟ್ ನಾಯಕತ್ವದ ಹಿಂದೆಯಿಲ್ಲ. ರೋಹಿತ್ ಶರ್ಮ ರಾಜೀನಾಮೆ ಕೊಟ್ಟ ಬಳಿಕ ಅವರ ಸ್ಥಾನಕ್ಕೆ ರಿಷಭ್ ಪಂತ್ ಅಥವಾ ಕೆ.ಎಲ್. ರಾಹುಲ್ ಅವರಂತಹ ಆಟಗಾರರಿಗೆ ನಾಯಕನ ಜವಾಬ್ದಾರಿ ಹಸ್ತಾಂತರಿಸಬಹದು" ಎಂದಿದ್ದಾರೆ.

ಇಬ್ಬರು ವಿಕೆಟ್​ ಕೀಪರ್​-ಬ್ಯಾಟರ್​

"ಇವರಿಬ್ಬರಲ್ಲಿ ಯಾರಿಗಾದರೂ ಕ್ಯಾಪ್ಟನ್​ ಸ್ಥಾನವನ್ನು ನೀಡಬಹುದು. ರಿಷಭ್ ಮತ್ತು ರಾಹುಲ್ ಐಪಿಎಲ್​ನ ಫ್ರಾಂಚೈಸಿಗಳಲ್ಲಿ ಈಗಾಗಲೇ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ. ಕ್ಯಾಪ್ಟನ್​ ಜವಾಬ್ದಾರಿ ಹೇಗಿರುತ್ತೆ ಎಂಬ ಅನುಭವ ಅವರಿಗಿದೆ. ಹೀಗಾಗಿ ಟೆಸ್ಟ್ ಕ್ಯಾಪ್ಟನ್​ ಆಗಿ ಈ ಇಬ್ಬರ ಪೈಕಿ ಯಾರಿಗೇ ಕೊಟ್ಟರು ಉತ್ತಮರಾಗಿರುತ್ತದೆ" ಎಂದು ಕೈಫ್ ಹೇಳಿದ್ದಾರೆ,(ಏಜೆನ್ಸೀಸ್).