ಕ್ರೀಡೆ

ನಮ್ಮ ತಂಡದಲ್ಲಿ ಅನೇಕ ನಾಯಕರಿದ್ದಾರೆ ಆದ್ರೆ ಹಾರ್ದಿಕ್​ ಪಾಂಡ್ಯ... ಅಚ್ಚರಿ ಹೇಳಿಕೆ ನೀಡಿದ ಎಸ್​ಕೆವೈ! Suryakumar Yadav

Suryakumar Yadav : ದಕ್ಷಿಣ ಆಫ್ರಿಕಾದಲ್ಲಿ ಜಯಗಳಿಸಿದ ನಂತರ, ಸೂರ್ಯಕುಮಾರ್ ಯಾದವ್​ ನೇತೃತ್ವದ ತಂಡ ತವರಿನಲ್ಲಿ ಮತ್ತೊಂದು ಕಿರು ಸ್ವರೂಪದ ಹೋರಾಟಕ್ಕೆ ಸಿದ್ಧವಾಗಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು (ಜ.22) ಕೋಲ್ಕತ್ತದಲ್ಲಿ ನಡೆಯಲಿದೆ. ಈಡನ್ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಉಭಯ ತಂಡಗಳು ಸಂಪೂರ್ಣ ಸನ್ನದ್ಧವಾಗಿವೆ. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ರನ್​ ಮಳೆಯನ್ನೇ ಹರಿಸುವ ಭರವಸೆಯಲ್ಲಿವೆ.

2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಬಳಿಕ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಟೀಮ್ ಇಂಡಿಯಾ ವಿರುದ್ಧ ಸೋತಿದ್ದ ಇಂಗ್ಲೆಂಡ್ ತಂಡ ಸೇಡು ತೀರಿಸಿಕೊಳ್ಳುವ ಆಶಯವನ್ನು ಹೊಂದಿದ್ದರೆ, ಭಾರತ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಉಭಯ ತಂಡಗಳ ಹೋರಾಟ ಇನ್ನಷ್ಟು ರೋಮಾಂಚನವಾಗಿರಲಿದೆ.

2024ರ ಟಿ20 ವಿಶ್ವಕಪ್ ಸಮಯದಲ್ಲಿ ಟೀಮ್ ಇಂಡಿಯಾದ ಉಪನಾಯಕರಾಗಿದ್ದ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟು, ರೋಹಿತ್ ಶರ್ಮರ ಉತ್ತರಾಧಿಕಾರಿಯಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಕ್ಯಾಪ್ಟನ್​ ಆಗಿ ಘೋಷಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಟಿ20 ವಿಶ್ವಕಪ್​ನಲ್ಲಿ ಆಲ್​ರೌಂಡರ್​ ಆಗಿ ಅದ್ಭುತ ಪ್ರದರ್ಶನ ನೀಡಿದರು ಕೂಡ ಹಾರ್ದಿಕ್​ ಬದಲಿಗೆ ಸೂರ್ಯಕುಮಾರ್​ಗೆ ನಾಯಕತ್ವ ಪಟ್ಟ ಹೋಗಿದ್ದು, ಆ ಸಂದರ್ಭದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ಪೂರ್ಣ ಪ್ರಮಾಣದ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಂಡ ಸೂರ್ಯಕುಮಾರ್​, ಮೊದಲ ಸರಣಿಯಲ್ಲೇ 3-0 ಅಂತರದ ಕ್ಲೀನ್ ಸ್ವೀಪ್ ಮೂಲಕ ತಮ್ಮ ಆಳ್ವಿಕೆಯನ್ನು ಭರ್ಜರಿಯಾಗಿ ಆರಂಭಿಸಿದರು. ಇದಾದ ಬಳಿಕ ಸೂರ್ಯಕುಮಾರ್​, ಬಾಂಗ್ಲಾದೇಶ ವಿರುದ್ಧ ತವರು ನೆಲದಲ್ಲಿ ಅದೇ ಸಾಧನೆಯನ್ನು ಪುನರಾವರ್ತಿಸಿದರು. ಇದಾದ ನಂತರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು 3-1 ಅಂತರದ ಗೆಲುವಿನತ್ತ ಮುನ್ನಡೆಸಿದರು. ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್​ ಇಂಡಿಯಾ ಸಜ್ಜಾಗಿದ್ದು, ಅಕ್ಷರ್ ಪಟೇಲ್ ಅವರನ್ನು ಹೊಸ ಉಪನಾಯಕನನ್ನಾಗಿ ನೇಮಿಸಲಾಗಿದೆ. ಈ ಸಂದರ್ಭದಲ್ಲಿ, ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಸೂರ್ಯಕುಮಾರ್​ ಅವರ ಸಂಬಂಧದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ಮಂಗಳವಾರ (ಜ.21) ಸುದ್ದಿಗೋಷ್ಠಿಯಲ್ಲಿ ಈ ಕುರಿತು ಎದುರಾದ ಪ್ರಶ್ನೆಗೆ ಸೂರ್ಯಕುಮಾರ್​ ಅವರು ಶಾಂತವಾಗಿಯೇ ಪ್ರತಿಕ್ರಿಯಿಸಿದರು. ನನಗೆ ಹಾರ್ದಿಕ್ ಪಾಂಡ್ಯ ಜೊತೆ ಉತ್ತಮ ಬಾಂಧವ್ಯವಿದೆ. ನಮ್ಮ ನಾಯಕತ್ವದ ತಂಡದಲ್ಲಿ ಹಾರ್ದಿಕ್​ ಯಾವಾಗಲೂ ಪ್ರಮುಖ ಭಾಗವಾಗಿದ್ದಾರೆ. ಭಾರತ ತಂಡವನ್ನು ಹೇಗೆ ಮುನ್ನಡೆಸಬೇಕೆಂದು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಮೈದಾನಕ್ಕೆ ಇಳಿದಾಗ ನಾವೆಲ್ಲರೂ ಚರ್ಚಿಸಿ ತಂಡಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಿಖರವಾಗಿ ಹೇಳುವುದಾದರೆ, ನಮ್ಮ ತಂಡದಲ್ಲಿ ಒಬ್ಬರಿಗಿಂತ ಹೆಚ್ಚು ನಾಯಕರಿದ್ದಾರೆ. ಮೈದಾನದಲ್ಲಿ ಅಗತ್ಯವಿದ್ದಾಗ ಅವರು ಕೂಡ ಸಲಹೆಗಳು ನೀಡುತ್ತಾರೆ ಎಂದು ಹೇಳಿದರು.

ನಾನು ಈ ಹಿಂದೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಆಟಗಾರರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾರೆ. ಕೋಚ್ ಮೇಲ್ವಿಚಾರಣೆಯಲ್ಲಿ, ನಮ್ಮ ತಂಡ ಪ್ರಸ್ತುತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಉತ್ತಮವಾಗಿ ಆಡುತ್ತಿದ್ದಾರೆ. ಹೀಗಾಗಿ ಬೇರೆ ಆಟಗಾರನ ಬಗ್ಗೆ ಯೋಚಿಸಿಲ್ಲ. ಟಿ20 ವಿಶ್ವಕಪ್ ಟೂರ್ನಿಗೆ ಇನ್ನೂ ಬಹಳ ಸಮಯವಿದೆ. ಈ ಮಧ್ಯೆ, ಬಹುತೇಕ ಒಂದೇ ತಂಡದೊಂದಿಗೆ ಹೆಚ್ಚಿನ ಪಂದ್ಯಗಳನ್ನು ಆಡುವ ಮೂಲಕ ತಂಡವನ್ನು ಸಿದ್ಧಪಡಿಸುವುದು ಮುಖ್ಯವಾಗಿದೆ ಎನ್ನುವ ಮೂಲಕ ಪ್ರಸ್ತುತ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಸೂರ್ಯಕುಮಾರ್​, ಭವಿಷ್ಯದ ಯೋಜನೆಗಳನ್ನು ಸಹ ವಿವರಿಸಿದರು.

ಚೆನ್ನಾಗಿ ಆಡದ ಕಾರಣ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಎಂದು ಹೇಳಿದ್ದಕ್ಕೆ ಸೂರ್ಯಕುಮಾರ್​ ಹೌದು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಏಕದಿನ ಸ್ವರೂಪದಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ತಮ್ಮನ್ನು ಆಯ್ಕೆ ಮಾಡಲಿಲ್ಲಿ ಮತ್ತು ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಆಡಲು ಸಾಧ್ಯವಾಗದ ಕಾರಣ ನಾನು ಕೂಡ ತೀವ್ರ ನಿರಾಶೆಗೊಂಡಿದ್ದೇನೆ ಎಂದು ಎಸ್​ಕೆವೈ ತಿಳಿಸಿದರು. (ಏಜೆನ್ಸೀಸ್​)