ಕ್ರೀಡೆ

2023ರಲ್ಲಿ ಐಪಿಎಲ್ ಬ್ರಾಂಡ್​ ಮೌಲ್ಯ ಶೇ. 28 ಪ್ರಗತಿ; ಹೀಗಿದೆ ಕಾರಣ...

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಎನಿಸಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಬ್ರಾಂಡ್​ ಮೌಲ್ಯ 2023ರಲ್ಲಿ ಶೇ. 28 ಪ್ರಗತಿ ಕಂಡಿದ್ದು, 89,263 ಕೋಟಿ ರೂಪಾಯಿ (10.7 ಬಿಲಿಯನ್​ ಡಾಲರ್​) ಬ್ರಾಂಡ್​ ಮೌಲ್ಯ ಪಡೆದುಕೊಂಡಿದೆ.

ಬ್ರಾಂಡ್​ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ "ಬ್ರಾಂಡ್​ ಫಿನಾನ್ಸ್​ ರಿವೀಲ್ಸ್​' ಸಿದ್ಧಪಡಿಸಿರುವ ವರದಿಯ ಪ್ರಕಾರ, ಐಪಿಎಲ್​ ಬ್ರಾಂಡ್​ ಮೌಲ್ಯ 2008ರ ಆರಂಭಿಕ ವರ್ಷದಿಂದ ಈಗ ಶೇ. 433ರಷ್ಟು ಪ್ರಗತಿ ಕಂಡಿದೆ. 2022ರಲ್ಲಿ ಐಪಿಎಲ್​ 70,070 ಕೋಟಿ ರೂ. (8.4 ಬಿಲಿಯನ್​ ಡಾಲರ್​) ಬ್ರಾಂಡ್​ ಮೌಲ್ಯ ಹೊಂದಿತ್ತು. ನಂತರದಲ್ಲಿ 48,390 ಕೋಟಿ ರೂ. ಮೊತ್ತದ ಪ್ರಸಾರ ಹಕ್ಕು ಒಪ್ಪಂದ ಪಡೆದುಕೊಂಡಿರುವುದರಿಂದ, ಎರಡು ಹೊಸ ತಂಡಗಳ ಸೇರ್ಪಡೆಯಿಂದ ಮತ್ತು ಕೋವಿಡ್​-19 ಭೀತಿ ಕಳೆದು ಕ್ರೀಡಾಂಗಣಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಪ್ರವೇಶ ಪಡೆದಿರುವುದರಿಂದ ಐಪಿಎಲ್​ ಬ್ರಾಂಡ್​ ಮೌಲ್ಯ ಭಾರಿ ಏರಿಕೆ ಕಂಡಿದೆ.

ಇನ್ನು ಉದ್ಯಮಿ ಮುಕೇಶ್​ ಅಂಬಾನಿ ಒಡೆತನದ ಒಟಿಟಿ ವೇದಿಕೆ ಜಿಯೋಸಿನಿಮಾದಲ್ಲಿ 15 ಭಾಷೆಗಳಲ್ಲಿ ಉಚಿತವಾಗಿ ಐಪಿಎಲ್​ ಪಂದ್ಯಗಳನ್ನು ನೇರಪ್ರಸಾರ ಮಾಡಿರುವುದು ಕೂಡ ಬ್ರಾಂಡ್​ ಮೌಲ್ಯ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ವರದಿ ತಿಳಿಸಿದೆ.

10 ಶತಕೋಟಿ ಡಾಲರ್​ಗಿಂತ ಹೆಚ್ಚಿನ ಬ್ರಾಂಡ್​ ಮೌಲ್ಯ ಹೊಂದಿರುವ ಖಾಸಗಿ ಕಂಪನಿಯನ್ನು ಡೆಕಾಕಾರ್ನ್​ ಎಂದು ಬಣ್ಣಿಸಲಾಗುತ್ತದೆ. ಐಪಿಎಲ್​ ಕೂಡ ಈಗ ಉದ್ಯಮ ವಲಯದ ಈ ಮೌಲ್ಯವನ್ನು ಪಡೆದುಕೊಂಡಿದೆ.