ಕ್ರೀಡೆ

ಸೂಪರ್​ 8 ಪಂದ್ಯಗಳ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾದ ಇಬ್ಬರು ಆಟಗಾರರು ಮನೆಗೆ ವಾಪಸ್!​

ಬೆಂಗಳೂರು: ಟೀಮ್ ಇಂಡಿಯಾ ಸತತ ಗೆಲುವಿನೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8ರ ಹಂತ ಪ್ರವೇಶಿಸಿದೆ. ಗ್ರೂಪ್​ ಹಂತದಲ್ಲಿ ಶನಿವಾರ (ಜೂನ್​ 15) ಕೆನಡಾ ವಿರುದ್ಧ ಕೊನೆಯ ಪಂದ್ಯ ನಡೆಯಲಿದೆ. ಈಗಾಗಲೇ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ವಿರುದ್ಧ ಗೆದ್ದು, ಸೂಪರ್ 8ಕ್ಕೆ ಅರ್ಹತೆ ಪಡೆದಿರುವ ರೋಹಿತ್​ ಸೇನೆ ಕೆಲ ಬದಲಾವಣೆಗಳೊಂದಿಗೆ ನಾಮಮಾತ್ರಕ್ಕೆ ಈ ಪಂದ್ಯವನ್ನು ಆಡಲಿದೆ. ಸದ್ಯ ಟೀಮ್​ ಇಂಡಿಯಾದ ಗಮನ ಸೂಪರ್ 8 ಪಂದ್ಯಗಳತ್ತ ನೆಟ್ಟಿದೆ.

ಕೆನಡಾ ವಿರುದ್ಧದ ಪಂದ್ಯದ ನಂತರ ಭಾರತ ತಂಡ ಸೂಪರ್ 8 ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸಲಿದೆ. ಅಮೆರಿಕದೊಂದಿಗೆ ವೆಸ್ಟ್ ಇಂಡೀಸ್ ಕೂಡ ಈ ಟಿ20 ವಿಶ್ವಕಪ್ ಆತಿಥ್ಯ ವಹಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಎಲ್ಲ ಸೂಪರ್ 8 ಪಂದ್ಯಗಳು ಅಲ್ಲಿಯೇ ನಡೆಯಲಿವೆ. ಆದರೆ, ಸೂಪರ್ 8 ಪಂದ್ಯಗಳ ಆರಂಭಕ್ಕೂ ಮುನ್ನವೇ ಇಬ್ಬರು ಭಾರತೀಯ ಆಟಗಾರರು ತಂಡವನ್ನು ತೊರೆದು ಭಾರತಕ್ಕೆ ಮರಳಲಿದ್ದಾರೆ.

ನಾಳೆ ಕೆನಡಾ ವಿರುದ್ಧದ ಪಂದ್ಯದ ಬಳಿಕ ಅಮೆರಿಕದಿಂದ ವೆಸ್ಟ್ ಇಂಡೀಸ್​ಗೆ ತೆರಳುವ ಬದಲು ಭಾರತಕ್ಕೆ ಮರಳಲಿದ್ದಾರೆ. ಆದರೆ, ಆ ಇಬ್ಬರು ಆಟಗಾರರು 15ರ ಬಳಗದಲ್ಲಿರುವ ಆಟಗಾರರಲ್ಲ. ಸ್ಟ್ಯಾಂಡ್‌ಬೈ ಪ್ರವಾಸದಲ್ಲಿರುವ ನಾಲ್ಕು ಆಟಗಾರರ ಪೈಕಿ ಇಬ್ಬರನ್ನು ಮನೆಗೆ ಕಳುಹಿಸಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ. 15 ಜನರ ತಂಡವನ್ನು ಹೊರತುಪಡಿಸಿ, ರಿಂಕು ಸಿಂಗ್, ಅವೇಶ್ ಖಾನ್, ಶುಭಮನ್ ಗಿಲ್ ಮತ್ತು ಖಲೀಲ್ ಅಹ್ಮದ್ ಸ್ಟ್ಯಾಂಡ್‌ಬೈ ಆಟಗಾರರಾಗಿ ಆಯ್ಕೆಯಾಗಿದ್ದರು.

ಈ ನಾಲ್ವರು ಆಟಗಾರರು ಮೊದಲ ಪಂದ್ಯದಿಂದಲೂ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾರೆ. ತಂಡದ ಅಭ್ಯಾಸ ಸೆಷನ್‌ನಲ್ಲಿ ಸಹ ಭಾಗವಹಿಸುತ್ತಿದ್ದರು. ಆದರೆ, ಕೆನಡಾ ವಿರುದ್ಧದ ಪಂದ್ಯದ ನಂತರ, ಟೀಮ್ ಮ್ಯಾನೇಜ್ಮೆಂಟ್ ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ಅವರನ್ನು ಭಾರತಕ್ಕೆ ಕಳುಹಿಸುತ್ತದೆ. ತಂಡಕ್ಕೆ ಇನ್ನು ಮುಂದೆ ಅವರ ಅಗತ್ಯವಿಲ್ಲದ ಕಾರಣ ವೆಸ್ಟ್ ಇಂಡೀಸ್ ಬದಲಿಗೆ ಭಾರತಕ್ಕೆ ಕಳುಹಿಸಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕೆ ಬಿಸಿಸಿಐ ಕೂಡ ಓಕೆ ಹೇಳಿದೆ ಎಂದು ವರದಿಯಾಗಿದೆ.

ಇನ್ನಿಬ್ಬರು ಸ್ಟ್ಯಾಂಡ್‌ಬೈ ಆಟಗಾರರಾದ ರಿಂಕು ಸಿಂಗ್ ಮತ್ತು ಖಲೀಲ್ ಅಹ್ಮದ್ ತಂಡದಲ್ಲಿ ಉಳಿಯಲಿದ್ದಾರೆ. ಇಬ್ಬರೂ ತಂಡದೊಂದಿಗೆ ವೆಸ್ಟ್ ಇಂಡೀಸ್‌ಗೆ ತೆರಳಲಿದ್ದಾರೆ. (ಏಜೆನ್ಸೀಸ್​)