ಕ್ರೀಡೆ

ಪಾಕ್​ ವಿರುದ್ಧ ಭರ್ಜರಿ ಗೆಲುವಿನ ಬಳಿಕ ಅಖ್ತರ್​ಗೆ ಟಾಂಗ್​ ನೀಡಿದ ಸಚಿನ್​ ತೆಂಡುಲ್ಕರ್​!

ಅಹಮದಾಬಾದ್​: ಭಾರತ-ಪಾಕ್​ ಪಂದ್ಯವನ್ನು ಕ್ರೀಡಾಂಗಣದಲ್ಲಿ ಆನಂದಿಸಿದ ದಿಗ್ಗಜ ಸಚಿನ್​ ತೆಂಡುಲ್ಕರ್​, ಬಳಿಕ ಪಾಕ್​ ಮಾಜಿ ವೇಗಿ ಶೋಯಿಬ್​ ಅಖ್ತರ್​ಗೆ ಟಾಂಗ್​ ನೀಡಿದರು.

ಹಿಂದೆ ಸಚಿನ್​ರನ್ನು ಔಟ್​ ಮಾಡಿದ ಚಿತ್ರವನ್ನು ಶುಕ್ರವಾರ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, ನಾಳೆಯೂ ಈ ರೀತಿ ಆಗಬೇಕೇ? ಎಂದು ಬರೆದು "ಥಂಡಾರಖ್​' (ಶಾಂತವಾಗಿರಿ) ಎಂಬ ಹ್ಯಾಷ್​ಟ್ಯಾಂಗ್​ ಬಳಸಿದ್ದರು. ಪಂದ್ಯದ ನಂತರ ಸಚಿನ್​, "ಗೆಳೆಯ ನಿಮ್ಮ ಸಲಹೆಯನ್ನು ಪಾಲಿಸಿದೆವು. ಎಲ್ಲವನ್ನೂ ಶಾಂತವಾಗಿ ಮುಗಿಸಿದೆವು' ಎಂದು ಪ್ರತಿಕ್ರಿಯಿಸಿದರು.

ಭಾನುವಾರ ಅಹಮದಾಬಾದ್​ನಲ್ಲಿ ಭಾರತೀಯ ಕ್ರಿಕೆಟ್​ ಪ್ರೇಮಿಗಳೆಲ್ಲರ ಕನಸಿನ ನಿರ್ವಹಣೆ ತೋರಿದ ಟೀಮ್​ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಹೈ-ವೋಲ್ಟೇಜ್​ ಪಂದ್ಯದಲ್ಲಿ ಸರಾಗವಾಗಿ ಗೆದ್ದು ಬೀಗಿದೆ. ಈ ಮೂಲಕ ಏಕದಿನ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧದ ಅಜೇಯ ಓಟವನ್ನು ಭಾರತ ಸತತ 8ನೇ ಪಂದ್ಯಕ್ಕೆ ವಿಸ್ತರಿಸಿದೆ. ಜಸ್​ಪ್ರೀತ್​ ಬುಮ್ರಾ (19ಕ್ಕೆ 2) ಸಾರಥ್ಯದಲ್ಲಿ ಭಾರತೀಯ ಬೌಲರ್​ಗಳು ಪಾಕಿಸ್ತಾನವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಲು ಶ್ರಮಿಸಿದರೆ, ರೋಹಿತ್​ ಶರ್ಮ (86 ರನ್​, 63 ಎಸೆತ, 6 ಬೌಂಡರಿ, 6 ಸಿಕ್ಸರ್​) ನಾಯಕನಾಟ ಆಡುವ ಮೂಲಕ ಭಾರತವನ್ನು ಸುಲಭವಾಗಿಯೇ ಗುರಿ ಸೇರಿಸಿದರು. ಈ ಸರ್ವಾಂಗೀಣ ನಿರ್ವಹಣೆಯೊಂದಿಗೆ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಗೆಲುವಿನ ಸಂಭ್ರಮ ಕಂಡ ಭಾರತ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.