Virat Kohli : ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಂಪೂರ್ಣ ವಿಫಲವಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮಾಜಿ ಕೋಚ್ ಮತ್ತು ಆಸೀಸ್ ಮಾಜಿ ಆಟಗಾರ ಸೈಮನ್ ಕ್ಯಾಟಿಚ್ ಕೊಹ್ಲಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ನೀಡಿದ 340 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 184 ರನ್ಗಳ ಬೃಹತ್ ಅಂತರದಿಂದ ಸೋಲುಂಡಿತು. ನಿರ್ಣಾಯಕ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಕೇವಲ 5 ರನ್ ಗಳಿಸಿ ಡಗೌಟ್ ತಲುಪಿದರು. ಪರ್ತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಆ ಬಳಿಕ ಕಳಪೆ ಬ್ಯಾಟಿಂಗ್‌ನಿಂದಾಗಿ ಟೀಕೆಗೆ ಗುರಿಯಾಗಿದ್ದರು. ಪರ್ತ್‌ನಲ್ಲಿ ಶತಕದ ನಂತರ ವಿರಾಟ್ ಕೊಹ್ಲಿ ಸತತವಾಗಿ 7, 11, 3, 36 ಮತ್ತು 5 ರನ್ ಗಳಿಸಿದ್ದಾರೆ.
ಇದೀಗ ಸೈಮನ್ ಕ್ಯಾಟಿಚ್ ಅವರು ವಿರಾಟ್ ಕೊಹ್ಲಿ ಫಾರ್ಮ್ ಅನ್ನು ಟೀಕಿಸಿ, ದಿ ಕಿಂಗ್ ಈಸ್ ಡೆಡ್ ( ರಾಜ ಸತ್ತು ಹೋಗಿದ್ದಾನೆ) ಎಂದಿದ್ದಾರೆ. ಕೊಹ್ಲಿ ಬ್ಯಾಟ್ ಬೀಸಲು ಕಷ್ಟಪಡುತ್ತಿದ್ದಾನೆ. ಬುಮ್ರಾ ಈಗ ರಾಜನ ಸ್ಥಾನವನ್ನು ಕಿತ್ತುಕೊಂಡಿದ್ದಾರೆ ಎಂದು ಸೈಮನ್ ಕ್ಯಾಟಿಚ್ ಹೇಳಿದರು.
ಸದ್ಯ ವಿರಾಟ್ ತುಂಬಾ ಖಿನ್ನತೆಗೆ ಒಳಗಾಗಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಕೊಹ್ಲಿಗೆ ದೊಡ್ಡ ಹಿನ್ನಡೆಯಾಗಿದೆ. ಜಸ್ಪ್ರೀತ್ ಬುಮ್ರಾ ಮಾತ್ರ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅವರು ಈಗಾಗಲೇ 12.83 ಸರಾಸರಿಯಲ್ಲಿ 30 ವಿಕೆಟ್ ಪಡೆದಿದ್ದಾರೆ. ಇದುವರೆಗೆ 44 ಟೆಸ್ಟ್ ಪಂದ್ಯಗಳನ್ನಾಡಿದ್ದು, 203 ವಿಕೆಟ್ ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ ಎಂದು ಬುಮ್ರಾರನ್ನು ಮನಸಾರೆ ಹೊಗಳಿದ ಸೈಮನ್ ಕ್ಯಾಟಿಸ್ ಕೊಹ್ಲಿಯನ್ನು ಟೀಕಿಸಿದರು.
ಇನ್ನು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅಂತಿಮ ಟೆಸ್ಟ್ ಸರಣಿಯು ಫಲಿತಾಂಶವನ್ನು ನಿರ್ಧರಿಸುತ್ತದೆ. ಸದ್ಯ 4 ಟೆಸ್ಟ್ ಪಂದ್ಯಲ್ಲಿ ಆಸ್ಟ್ರೇಲಿಯಾ 2ರಲ್ಲಿ ಗೆದ್ದಿದ್ದರೆ ಭಾರತ 1 ಪಂದ್ಯವನ್ನು ಗೆದ್ದುಕೊಂಡಿದೆ. ಉಳಿದ ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಒಂದು ಟೆಸ್ಟ್ ಬಾಕಿದ್ದು, ಜನವರಿ 3ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ. ಈ ಟೆಸ್ಟ್ನಲ್ಲಿ ಭಾರತ ಗೆದ್ದರೆ ಸರಣಿ ಸಮವಾಗಲಿದೆ. ಒಂದು ವೇಳೆ ಆಸಿಸ್ ಗೆದ್ದರೆ ಬಾರ್ಡರ್ ಗವಾಸ್ಕರ್ ಟ್ರೋಫಿ ಆಸಿಸ್ ಪಾಲಾಗಲಿದೆ. (ಏಜೆನ್ಸೀಸ್)