ಕ್ರೀಡೆ

ಐಪಿಎಲ್​ ಇತಿಹಾಸದಲ್ಲಿ ಮೊದಲ ಬಾರಿಗೆ ಹರಾಜಿಗೆ ಬಂದ ಇಟಲಿ ಕ್ರಿಕೆಟಿಗ!

ನವದೆಹಲಿ: ಮಧ್ಯಮ ವೇಗಿ ಥಾಮಸ್​ ಡ್ರಾಕಾ ಐಪಿಎಲ್​ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಇಟಲಿಯ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. 24 ವರ್ಷದ ಡ್ರಾಕಾ 2024ರ ಗ್ಲೋಬಲ್​ ಟಿ20 ಕೆನಡಾ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 11 ವಿಕೆಟ್​ ಕಬಳಿಸಿ ಮಿಂಚಿದ್ದರು. ಡ್ರಾಕಾ ಇಟಲಿ ಪರ 4 ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನೂ ಆಡಿದ್ದು 8 ವಿಕೆಟ್​ ಕಬಳಿಸಿದ್ದಾರೆ.

ಯುಎಇಯ ಐಎಲ್​ಟಿ20ಯಲ್ಲಿ ಆಡಲಿರುವ ಮುಂಬೈ ಎಮಿರೇಟ್ಸ್​ ತಂಡದಲ್ಲೂ ಇತ್ತೀಚೆಗೆ ಸ್ಥಾನ ಪಡೆದಿದ್ದಾರೆ. ಡ್ರಾಕಾ ಐಪಿಎಲ್​ ಹರಾಜಿಗೆ 30 ಲಕ್ಷ ರೂ. ಮೂಲಬೆಲೆಯೊಂದಿಗೆ ವಿದೇಶಿ ಆಲ್ರೌಂಡರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮಿಚೆಲ್​ ಸ್ಟಾರ್ಕ್​ ಮತ್ತೆ 2 ಕೋಟಿ ರೂ.ನಿಂದ ಶುರು!

ಕಳೆದ ವರ್ಷದ ಐಪಿಎಲ್​ ಹರಾಜಿನಲ್ಲಿ ದಾಖಲೆಯ 24.50 ಕೋಟಿ ರೂ.ಗೆ ಕೆಕೆಆರ್​ ತಂಡಕ್ಕೆ ಸೇಲಾಗಿದ್ದ ಆಸೀಸ್​ ವೇಗಿ ಮಿಚೆಲ್​ ಸ್ಟಾರ್ಕ್​, ಫೈನಲ್​ನಲ್ಲಿ ಅಮೋ ದಾಳಿ ನಡೆಸಿ ಪ್ರಶಸ್ತಿ ಗೆದ್ದುಕೊಟ್ಟ ಸಾಧನೆಯ ನಡುವೆಯೂ ಈ ಬಾರಿ ರಿಟೇನ್​ ಆಗಿಲ್ಲ. ಹೀಗಾಗಿ ಈ ಬಾರಿ ಮತ್ತೆ 2 ಕೋಟಿ ರೂ. ಮೂಲಬೆಲೆಯೊಂದಿಗೆ ಐಪಿಎಲ್​ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್​ ಕೂಡ 2 ಕೋಟಿ ರೂ. ಮೂಲಬೆಲೆಯೊಂದಿಗೆ ಪಾಲ್ಗೊಳ್ಳಲಿದ್ದಾರೆ. ಈ ಹಿಂದಿನ ಹರಾಜುಗಳಲ್ಲಿ ಬಿಕರಿಯಾಗದ ಆಸೀಸ್​ ಅನುಭವಿ ಆಫ್​ ಸ್ಪಿನ್ನರ್​ ನಾಥನ್​ ಲ್ಯಾನ್​ ಈ ಬಾರಿ 2 ಕೋಟಿ ರೂ. ಮೂಲಬೆಲೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ಟಿ20 ವಿಶ್ವಕಪ್​ನಲ್ಲಿ ಅಮೆರಿಕ ಪರ ಆಡಿದ್ದ ಮುಂಬೈ ಮೂಲದ ವೇಗಿ ಸೌರಭ್​ ನೇತ್ರವಲ್ಕರ್​ 30 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.