ಕ್ರೀಡೆ

ಕಾನ್ಪುರದಲ್ಲಿ ಬಾಂಗ್ಲಾ ಕ್ರಿಕೆಟ್​ ತಂಡಕ್ಕೆ ಹಿಂದೂ ಸಂಘಟನೆಗಳ ಪ್ರತಿಭಟನೆಯ ಬಿಸಿ!

ಕಾನ್ಪುರ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಪ್ರವಾಸಿ ತಂಡದ ವಿರುದ್ಧ ಕಾನ್ಪುರದಲ್ಲಿ ಪ್ರತಿಭಟನೆ ನಡೆಯುವ ಭೀತಿ ಎದುರಾಗಿದೆ. ಬಾಂಗ್ಲಾ ವಿರುದ್ಧ ಕ್ರಿಕೆಟ್​ ಸರಣಿ ಆಡಬಾರದು ಎಂದು ಕಾನ್ಪುರದ ಹಿಂದು ಸಂಘಟನೆಗಳು ಬೆದರಿಕೆಯನ್ನೂ ಹಾಕಿದ್ದವು. ಇದರಿಂದಾಗಿ ಬಿಸಿಸಿಐ, ಪಂದ್ಯವನ್ನು ಲಖನೌಗೆ ಸ್ಥಳಾಂತರಿಸುವ ಬಗ್ಗೆಯೂ ಹಿಂದೊಮ್ಮೆ ಚಿಂತನೆ ನಡೆಸಿತ್ತು. ಅಂತಿಮವಾಗಿ ಉತ್ತರ ಪ್ರದೇಶ ಕ್ರಿಕೆಟ್​ ಸಂಸ್ಥೆ ಪಂದ್ಯವನ್ನು ಕಾನ್ಪುರದಲ್ಲೇ ನಡೆಸಲು ನಿರ್ಧರಿಸಿತ್ತು. ಹೀಗಾಗಿ ಪ್ರವಾಸಿ ಬಾಂಗ್ಲಾ ತಂಡಕ್ಕೆ ಕಾನ್ಪುರದಲ್ಲಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.

ಪಂದ್ಯದ ಸಮಯದಲ್ಲೂ ಪ್ರತಿಭಟನೆಗಳಾಗದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾನ್ಪುರದ ಹೆಚ್ಚುವರಿ ಪೊಲೀಸ್​ ಆಯುಕ್ತ ಹರೀಶ್​ ಚಂದರ್​ ತಿಳಿಸಿದ್ದಾರೆ.

ಈ ನಡುವೆ ಅಖಿಲೇಶ್​ ಭಾರತೀಯ ಹಿಂದು ಮಹಾಸಭಾ ಬಾಂಗ್ಲಾ ವಿರುದ್ಧದ ಕಾನ್ಪುರ ಟೆಸ್ಟ್​ ಮತ್ತು ಗ್ವಾಲಿಯರ್​ ಟಿ20 ಪಂದ್ಯಕ್ಕೆ ಅಡ್ಡಿಪಡಿಸುವ ಬೆದರಿಕೆ ಒಡ್ಡಿದೆ. ಜತೆಗೆ ಗ್ರೀನ್​ಪಾರ್ಕ್​ ಸ್ಟೇಡಿಯಂ ಸಮೀಪದ ರಸ್ತೆಯಲ್ಲಿ ಹವನ ನಡೆಸಿ ಅಡಚಣೆಗೆ ಯತ್ನಿಸಿದೆ. ಇದರಿಂದ ಯುಪಿ ಪೊಲೀಸರು, 20 ಜನರ ವಿರುದ್ಧ ಎಫ್​​ಐಆರ್​ ದಾಖಲಿಸಿಕೊಂಡಿದ್ದಾರೆ.