ಕ್ರೀಡೆ

ವಿರಾಟ್​ ಕೊಹ್ಲಿ ಪಾಕಿಸ್ತಾನದಲ್ಲಿ ಆಡುವ ದಿನ ಮಾತ್ರ...; ಭಾರತ ವಿರುದ್ಧದ​ ಕದನಕ್ಕೂ ಮುನ್ನ ಪಾಕ್ ಮಾಜಿ ನಾಯಕನ ಹೇಳಿಕೆ ವೈರಲ್​

ಲಾಹೋರ್​: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​, ದಾಖಲೆಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ದಿನ ಕಳೆದಂತೆ ಅವರ ಕ್ರೇಜ್​ ಹೆಚ್ಚುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಕದನ ಶುರುವಾಗುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಸಾಕಷ್ಟು ಹೈಪ್​ ಕ್ರಿಯೇಟ್​ ಮಾಡಿದೆ. ಇದಕ್ಕೂ ಮುನ್ನ ಪಾಕ್​ ಕ್ರಿಕೆಟ್​ ತಂಡದ ಮಾಜಿ ಆಟಗಾರರೊಬ್ಬರು ವಿರಾಟ್​ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಅಜರ್​ ಅಲಿ ವಿರಾಟ್​ ಕೊಹ್ಲಿ ಕುರಿತಾಗಿ ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದ್ದು, ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ. ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದ್ದು, ವಿರಾಟ್​ ಕೊಹ್ಲಿ ತಾವು ಅಭಿಮಾನಿಗಳ ಸರದಾರ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ನಾಯಕ ಅಜರ್​ ಅಲಿ ವಿರಾಟ್​ ಕೊಹ್ಲಿ ಪಾಕಿಸ್ತಾನದಲ್ಲಿ ಯಾವತ್ತೂ ಆಡುತ್ತಾರೋ ಅವತ್ತು ಅವರ ಕ್ರೇಜ್​ ಏನೆಂದು ಇಡೀ ವಿಶ್ವಕ್ಕೆ ತಿಳಿಯುತ್ತದೆ. ವಿರಾಟ್​ ಕೊಹ್ಲಿ ಪಾಕಿಸ್ತಾನದ ನೆಲದಲ್ಲಿ ಆಡಿದ ದಿನ ಕ್ರೀಡಾಂಗಣದ ತುಂಬಾ ಹಸಿರು ಜೆರ್ಸಿ ತುಂಬಿರುತ್ತದೆ. ಆದರೆ, ಅದರ ಮೇಲೆ ವಿರಾಟ್​ ಎಂದು ಬರೆದಿರುತ್ತದೆ.

2019-22ರವರೆಗೂ ವಿರಾಟ್​ ಕೊಹ್ಲಿ ಕಳಪೆ ಫಾರ್ಮ್​ನಲ್ಲಿದಾಗ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲಿರುವ ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು. ಪಾಕಿಸ್ತಾನದಲ್ಲಿ ಅವರ ಬಗ್ಗೆ ಕ್ರೇಜ್​ ಅಷ್ಟರ ಮಟ್ಟಿಗಿದೆ. ವಿರಾಟ್​ ಅನ್ನು ಟೀಕಿಸುವ ಮೊದಲು ಜನರು ಆತ ಕ್ರಿಕೆಟ್​ನಲ್ಲಿ ಮಾಡಿರುವ ಸಾಧನೆಯನ್ನು ಮೊದಲು ನೋಡಬೇಕು.

ಪಾಕಿಸ್ತಾನದಲ್ಲಿ ವಿರಾಟ್​ ಕೊಹ್ಲಿ ಹೊರತುಪಡಿಸಿ ಭಾರತದ ಬೇರೆ ಆಟಗಾರರಿಗೂ ಅಭಿಮಾನಿಗಳಿದ್ದಾರೆ. ದಿಲೀಪ್​ ಕುಮಾರ್​, ಕಪಿಲ್​ ದೇವ್​, ಸುನೀಲ್​ ಗವಅಸ್ಕರ್, ಸಚಿನ್​ ತೆಂಡುಲ್ಕರ್​, ಎಂ.ಎಸ್. ಧೋನಿ, ಸೆಹ್ವಾಗ್​ ಹಾಗೂ ಯುವರಾಜ್ ಪಾಕಿಸ್ತಾನದಲ್ಲೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ವಿರಾಟ್​ ಕೊಹ್ಲಿ ಜನಪ್ರಿಯತೆ ಇವರೆಲ್ಲರಿಗಿಂತಲೂ ತುಸು ಹೆಚ್ಚಿದೆ. ಇತ್ತ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಅಜರ್​ ಅಲಿ ಹೇಳಿಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಅನೇಕರು ಇವರ ಹೇಳಿಕೆಯನ್ನು ಮೆಚ್ಚಿ ಕಮೆಂಟ್​ ಮಾಡುತ್ತಿದ್ದಾರೆ.