ಕ್ರೀಡೆ

ಇನ್ನು 2027ರ ವಿಶ್ವಕಪ್​ಗೆ ತಂಡ ಕಟ್ಟುವ ಸವಾಲು; ರೋಹಿತ್​ ಭವಿಷ್ಯದ ಕುತೂಹಲ...

*ಪ್ರಸಾದ್​ ಶೆಟ್ಟಿಗಾರ್​ ಬೆಂಗಳೂರು

ಸಮರ್ಥ ನಾಯಕತ್ವ, ಅನುಭವಿ ಬ್ಯಾಟರ್​ಗಳ ಜವಾಬ್ದಾರಿಯುತ ಆಟ, ಆಲ್ರೌಂಡರ್​ಗಳ ಉಪಯುಕ್ತ ಕೊಡುಗೆ, ನಾಲ್ವರು ಸ್ಪಿನ್ನರ್​ಗಳಿಂದ ಎದುರಾಳಿಗಳಿಗೆ ಕಡಿವಾಣ, ಫಿನಿಷರ್​ ಪಾತ್ರದಲ್ಲೂ ಮಿಂಚಿದ ವಿಕೆಟ್​ ಕೀಪರ್​... ಈ ಯಶಸ್ವಿ ಕಾರ್ಯತಂತ್ರಗಳ ಮೂಲಕ ಭಾರತ ತಂಡ "ಮಿನಿ ವಿಶ್ವಕಪ್​' ಖ್ಯಾತಿಯ ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನು ಅಜೇಯವಾಗಿ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೀಗ "ಮೆಗಾ ವಿಶ್ವಕಪ್​' ಅಂದರೆ 2027ರ ಏಕದಿನ ವಿಶ್ವಕಪ್​ನತ್ತ ಭಾರತ ಗಮನಹರಿಸಬೇಕಾಗಿದೆ. ಏಕದಿನ ವಿಶ್ವಕಪ್​ಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವುದರಿಂದ ಹಾಲಿ ತಂಡದಲ್ಲೇ ಕೆಲ ಬದಲಾವಣೆಗಳನ್ನು ಮಾಡಿ ಇನ್ನಷ್ಟು ಬಲಿಷ್ಠ ತಂಡವನ್ನು ರೂಪಿಸುವ ಸವಾಲು ಭಾರತದ ಮುಂದಿದೆ.

2027ರ ಅಕ್ಟೋಬರ್​ನಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ ಏಕದಿನ ವಿಶ್ವಕಪ್​ ನಡೆಯಲಿದೆ. ಅಲ್ಲಿಯವರೆಗೆ ಭಾರತ ತಂಡ ಕನಿಷ್ಠ 27 ಏಕದಿನ ಪಂದ್ಯಗಳನ್ನು ಆಡಲಿದ್ದು, ಬಲಿಷ್ಠ ತಂಡವನ್ನು ಕಟ್ಟಲು ಈ ಪಂದ್ಯಗಳನ್ನು ಬಳಸಿಕೊಳ್ಳಬೇಕಿದೆ.

ಕಳೆದ ಟಿ20 ವಿಶ್ವಕಪ್​ ಮತ್ತು ಚಾಂಪಿಯನ್ಸ್​ ಟ್ರೋಫಿಗಳಲ್ಲಿ ಭಾರತ ಸ್ಪಿನ್​ ಅಸ್ತ್ರವನ್ನು ಯಶಸ್ವಿಯಾಗಿ ಬಳಸಿಕೊಂಡು ಯಶ ಸಾಧಿಸಿದೆ. ಆದರೆ 2027ರ ಏಕದಿನ ವಿಶ್ವಕಪ್​, ವೇಗದ ಬೌಲಿಂಗ್​ ಸ್ನೇಹಿ ಎನಿಸಿರುವ ಆಫ್ರಿಕಾ ನೆಲದಲ್ಲಿ ನಡೆಯಲಿರುವುದರಿಂದ ಭಾರತ ವೇಗದ ಬೌಲಿಂಗ್​ ವಿಭಾಗವನ್ನು ಬಲಪಡಿಸಲು ಮತ್ತು ವೇಗದ ಬೌಲಿಂಗ್​ ಆಲ್ರೌಂಡರ್​ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಈಗಿನ ಕಾಂಬಿನೇಷನ್​ ಮತ್ತು ಕಾರ್ಯತಂತ್ರದಲ್ಲೇ ಹರಿಣಗಳ ನಾಡಿಗೆ ಹೋದರೆ ಯಶಸ್ಸು ಸಾಧಿಸುವುದು ಕಷ್ಟವೆನಿಸಬಹುದು.

ಚಾಂಪಿಯನ್ಸ್​ ಟ್ರೋಫಿ ವಿಜೇತ ತಂಡದಲ್ಲಿ ನಾಯಕ ರೋಹಿತ್​ ಶರ್ಮ 2027ರ ವಿಶ್ವಕಪ್​ವರೆಗೆ ಮುಂದುವರಿಯುವ ಖಚಿತತೆ ಇಲ್ಲ. ಆದರೆ 36 ವರ್ಷದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಹಾಲಿ ಫಾರ್ಮ್​ ಮತ್ತು ಫಿಟ್ನೆಸ್​ನಲ್ಲಿ 2027ರ ವಿಶ್ವಕಪ್​ನಲ್ಲೂ ಆಡುವ ವಿಶ್ವಾಸವಿಡಬಹುದು. ಆದರೆ 36 ವರ್ಷದ ಆಲ್ರೌಂಡರ್​ ರವೀಂದ್ರ ಜಡೇಜಾ ಮತ್ತು 34 ವರ್ಷದ ವೇಗಿ ಮೊಹಮದ್​ ಶಮಿ 2027ರ ವಿಶ್ವಕಪ್​ವರೆಗೆ ತಂಡದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇಲ್ಲ.

ಆರಂಭಿಕನಾಗಿ ಶುಭಮಾನ್​ ಗಿಲ್​, 4ನೇ ಕ್ರಮಾಂಕದ ಬ್ಯಾಟರ್​ ಆಗಿ ಶ್ರೇಯಸ್​ ಅಯ್ಯರ್​, ವಿಕೆಟ್​ ಕೀಪರ್​ ಆಗಿ ಕೆಎಲ್​ ರಾಹುಲ್​, ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ಆಗಿ ಅಕ್ಷರ್​ ಪಟೇಲ್​, ತಜ್ಞ ಸ್ಪಿನ್ನರ್​ ಆಗಿ ವರುಣ್​ ಚಕ್ರವರ್ತಿ, ಕುಲದೀಪ್​ ಯಾದವ್​, ವೇಗಿಗಳಾಗಿ ಹರ್ಷಿತ್​ ರಾಣಾ, ಅರ್ಷದೀಪ್​ ಸಿಂಗ್​ 2027ರ ವಿಶ್ವಕಪ್​ವರೆಗೂ ಮುಂದುವರಿಯಬಹುದಾಗಿದೆ. ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಫಿಟ್​ ಆಗಿದ್ದರೆ ಭಾರತ ಇನ್ನಷ್ಟು ಬಲ ಪಡೆದುಕೊಳ್ಳಲಿದೆ. ಈ ನಡುವೆ ಹಾರ್ದಿಕ್​ ಪಾಂಡ್ಯ ಜತೆಗೆ ವೇಗದ ಬೌಲಿಂಗ್​ ಆಲ್ರೌಂಡರ್​ ಆಗಿ ನಿತೀಶ್​ ಕುಮಾರ್​ ರೆಡ್ಡಿ ಅವರನ್ನೂ ಬೆಳೆಸುವ ಭಾರತ ಗಮನಹರಿಸಿದರೆ, ದ. ಆಫ್ರಿಕಾದ ಪಿಚ್​ಗಳಲ್ಲಿ ನೆರವಿಗೆ ಬರಲಿದ್ದಾರೆ.

ಇನ್ನು ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​, ಕೀಪರ್​ ರಿಷಭ್​ ಪಂತ್​, ಆಲ್ರೌಂಡರ್​ ವಾಷಿಂಗ್ಟನ್​ ಸುಂದರ್​ ಮುಂತಾದ ಕೆಲ ಆಟಗಾರರನ್ನು ಭಾರತ ಮೀಸಲು ಬಳಗದಲ್ಲಿ ಬಳಸಿಕೊಳ್ಳಬೇಕಿದೆ. ಆಗ ಮೂರನೇ ಬಾರಿ ಏಕದಿನ ವಿಶ್ವಕಪ್​ ಗೆಲ್ಲುವ ನಿಟ್ಟಿನಲ್ಲೂ ಭಾರತ ಬಲಿಷ್ಠ ತಂಡವನ್ನು ಕಟ್ಟಬಹುದು.

ಚಾಂಪಿಯನ್ಸ್​ ಟ್ರೋಫಿ ಗೆಲುವಿಗೆ ಭಾರತೀಯರ ಕೊಡುಗೆ:

ರೋಹಿತ್​ ಶರ್ಮ: 180 ರನ್​

ಶುಭಮಾನ್​ ಗಿಲ್​: 188 ರನ್​

ವಿರಾಟ್​ ಕೊಹ್ಲಿ: 218 ರನ್​

ಶ್ರೇಯಸ್​ ಅಯ್ಯರ್​: 243 ರನ್​

ಅಕ್ಷರ್​ ಪಟೇಲ್​, 140 ರನ್​, 5 ವಿಕೆಟ್​

ಕೆಎಲ್​ ರಾಹುಲ್​: 140 ರನ್​

ಹಾರ್ದಿಕ್​ ಪಾಂಡ್ಯ: 99 ರನ್​, 4 ವಿಕೆಟ್​

ರವೀಂದ್ರ ಜಡೇಜಾ: 27 ರನ್​, 5 ವಿಕೆಟ್​

ಕುಲದೀಪ್​ ಯಾದವ್​: 7 ವಿಕೆಟ್​

ವರುಣ್​ ಚಕ್ರವರ್ತಿ: 9 ವಿಕೆಟ್​

ಮೊಹಮದ್​ ಶಮಿ: 9 ವಿಕೆಟ್​

ಹರ್ಷಿತ್​ ರಾಣಾ: 4 ವಿಕೆಟ್​

ರೋಹಿತ್​ ಸಾರಥ್ಯ ಕುತೂಹಲ...

ಚಾಂಪಿಯನ್ಸ್​ ಟ್ರೋಫಿ ಗೆಲುವಿನ ಬೆನ್ನಲ್ಲೇ ನಾಯಕ ರೋಹಿತ್​ ಶರ್ಮ, ಏಕದಿನ ಮಾದರಿಯಿಂದ ಸದ್ಯಕ್ಕೆ ನಿವೃತ್ತಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. 8 ತಿಂಗಳ ಅಂತರದಲ್ಲಿ 2 ಐಸಿಸಿ ಟ್ರೋಫಿ ಗೆದ್ದುಕೊಟ್ಟ ನಾಯಕನನ್ನು ಬದಲಾಯಿಸಲು ಬಿಸಿಸಿಐ ಕೂಡ ಸದ್ಯಕ್ಕೆ ಮನಸ್ಸು ಮಾಡದು. ಆದರೆ ಇದರಿಂದ ರೋಹಿತ್​ ಇನ್ನು ಎಷ್ಟು ಸಮಯ ನಾಯಕರಾಗಿ ಮುಂದುವರಿಯುವರು ಮತ್ತು 2027ರ ಏಕದಿನ ವಿಶ್ವಕಪ್​ವರೆಗೂ ಆಡುವರೇ ಎಂಬ ಕುತೂಹಲ ಸೃಷ್ಟಿಯಾಗಿದೆ. 37 ವರ್ಷದ ರೋಹಿತ್​ 2027ರ ವಿಶ್ವಕಪ್​ ವೇಳೆ 40ರ ಸನಿಹ ತಲುಪಲಿದ್ದಾರೆ. ಅಲ್ಲಿಯವರೆಗೆ ಅವರಿಗೆ ಫಾರ್ಮ್​-ಫಿಟ್ನೆಸ್​ ಸಾಥ್​ ನೀಡುವುದೇ ಎಂಬ ಪ್ರಶ್ನೆ ಮೂಡುತ್ತದೆ. ಅಥವಾ ಉಪನಾಯಕ ಶುಭಮಾನ್​ ಗಿಲ್​ ಪಕ್ವತೆ ಪಡೆಯುವವರೆಗೆ ರೋಹಿತ್​ ನಾಯಕರಾಗಿ ಮುಂದುವರಿದು, ನಂತರ ನಾಯಕತ್ವ ಹಸ್ತಾಂತರಿಸಿ ನಿರ್ಗಮಿಸುವುದನ್ನೂ ತಳ್ಳಿಹಾಕುವಂತಿಲ್ಲ. ಈ ನಡುವೆ, ಏಕದಿನ ತಂಡದ ನಾಯಕತ್ವಕ್ಕೆ ಹಾರ್ದಿಕ್​ ಪಾಂಡ್ಯ ಕೂಡ ರೇಸ್​ನಲ್ಲಿದ್ದಾರೆ ಎಂದು ವರದಿಯಾಗಿತ್ತು. 2019 ಮತ್ತು 2023ರ ವಿಶ್ವಕಪ್​ಗೆ ಮುನ್ನ ಧೋನಿ, ಕೊಹ್ಲಿ 2 ವರ್ಷ ಮುಂಚಿತವಾಗಿಯೇ ನಾಯಕತ್ವ ತ್ಯಜಿಸಿದ್ದರು. ಆದರೆ ಈಗ ಭವಿಷ್ಯದ ನಾಯಕನ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲದಿರುವುದರಿಂದ ರೋಹಿತ್​ ಇನ್ನೂ ಕನಿಷ್ಠ ಒಂದು ವರ್ಷ ತಂಡವನ್ನು ಮುನ್ನಡೆಸುವ ನಿರೀಕ್ಷೆ ಹೆಚ್ಚಿದೆ.

2027ರ ಮೇ ತನಕ ಭಾರತದ

ಏಕದಿನ ಕ್ರಿಕೆಟ್​ ಸರಣಿಗಳು...

2025&ಆಗಸ್ಟ್​: ಬಾಂಗ್ಲಾದೇಶದಲ್ಲಿ 3 ಪಂದ್ಯ

2025&ಅಕ್ಟೋಬರ್​: ಆಸ್ಟ್ರೆಲಿಯಾದಲ್ಲಿ 3 ಪಂದ್ಯ

2025&ನವೆಂಬರ್​: ದ. ಆಫ್ರಿಕಾ ವಿರುದ್ಧ 3 ಪಂದ್ಯ

2026&ಜನವರಿ: ನ್ಯೂಜಿಲೆಂಡ್​ ವಿರುದ್ಧ 3 ಪಂದ್ಯ

2026&ಜೂನ್​: ಅ್ಘಾನಿಸ್ತಾನ ವಿರುದ್ಧ 3 ಪಂದ್ಯ

2026&ಜುಲೈ: ಇಂಗ್ಲೆಂಡ್​ ನೆಲದಲ್ಲಿ 3 ಪಂದ್ಯ

2026&ಅಕ್ಟೋಬರ್​: ವಿಂಡೀಸ್​ ವಿರುದ್ಧ 3 ಪಂದ್ಯ

2026&ನವೆಂಬರ್​: ನ್ಯೂಜಿಲೆಂಡ್​ನಲ್ಲಿ 3 ಪಂದ್ಯ

2026&ಡಿಸೆಂಬರ್​: ಶ್ರೀಲಂಕಾ ವಿರುದ್ಧ 3 ಪಂದ್ಯ

*ಒಟ್ಟು 27 ಏಕದಿನ ಪಂದ್ಯಗಳು.