ಮುಂಬೈ: ಇತ್ತೀಚೆಗೆ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಕಳಪೆ ನಿರ್ವಹಣೆ ತೋರಿತು ಎಂಬುದನ್ನು ಒಪ್ಪಿಕೊಂಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ್, ನಂತರ ಎದುರಾದ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಮುಂಬರುವ ಆಸ್ಟ್ರೆಲಿಯಾ ಪ್ರವಾಸದ ಸವಾಲಿಗೆ ಸಜ್ಜಾಗಿರುವುದಾಗಿ ಹೇಳಿದರು.
ನವೆಂಬರ್ 22ರಿಂದ ನಡೆಯಲಿರುವ 5 ಟೆಸ್ಟ್ ಪಂದ್ಯಗಳ ಬಾರ್ಡರ್-ಗಾವಸ್ಕರ್ ಟ್ರೋಫಿಗಾಗಿ ಆಸ್ಟ್ರೆಲಿಯಾಕ್ಕೆ ವಿಮಾನ ಏರುವುದಕ್ಕೆ ಮುನ್ನ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, "ನನಗೆ ಈ ಹುದ್ದೆ ಸ್ವೀಕರಿಸುವಾಗಲೇ ಇದೊಂದು ಕಠಿಣವಾದ ಕೆಲಸ ಎಂಬುದು ಗೊತ್ತಿತ್ತು. ಅದೇ ರೀತಿ ಪ್ರತಿಷ್ಠಿತ ಹುದ್ದೆಯೂ ಹೌದು. ಹೀಗಾಗಿ ನನಗೀಗ ಈ ಹುದ್ದೆಯ ಬಿಸಿ ತಟ್ಟಿದೆ ಎನ್ನಲಾರೆ. ದೇಶದ ಪರ ಶ್ರೇಷ್ಠ ಸಾಧನೆ ತೋರಿರುವ ಆಟಗಾರರು ನಮ್ಮ ಡ್ರೆಸ್ಸಿಂಗ್ ರೂಮ್ನಲ್ಲಿದ್ದಾರೆ. ಅವರು ಮುಂದೆಯೂ ಅದೇ ರೀತಿಯ ಸಾಧನೆಗಳನ್ನು ತೋರುವ ವಿಶ್ವಾಸವಿದೆ. ಅವರಿಗೆ ತರಬೇತಿ ನೀಡುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ' ಎಂದು ಹೇಳಿದರು.
ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ನಾವು ನಮ್ಮ ಅತ್ಯುತ್ತಮ ಆಟ ತೋರಲಿಲ್ಲ. ಆಸ್ಟ್ರೆಲಿಯಾದಲ್ಲಿ ನಡೆಯುವುದು ಹೊಸ ಸರಣಿ. ಆಸ್ಟ್ರೆಲಿಯಾ ಹೊಸ ಎದುರಾಳಿ. ನಾವು ಆಸ್ಟ್ರೆಲಿಯಾದಲ್ಲಿ ಮತ್ತೊಮ್ಮೆ ಸರಣಿ ಗೆಲ್ಲುವ ವಿಶ್ವಾಸದಿಂದಲೇ ಕಣಕ್ಕಿಳಿಯುವೆವು ಎಂದು 43 ವರ್ಷದ ಗಂಭೀರ್ ಹೇಳಿದರು.
ಭಾರತ ತಂಡ 2018-19 ಮತ್ತು 2020-21ರ ಕೊನೇ ಎರಡು ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್ ಸರಣಿಗಳಲ್ಲಿ 2-1 ಅಂತರದಿಂದ ಜಯಿಸಿತ್ತು. ಅಲ್ಲದೆ 2016-17ರಿಂದ ಬಾರ್ಡರ್-ಗಾವಸ್ಕರ್ ಟ್ರೋಫಿ ಭಾರತದ ಕೈಯಲ್ಲೇ ಇದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಸತತ 3ನೇ ಬಾರಿ ಫೈನಲ್ಗೇರಲು ಆಸೀಸ್ನಲ್ಲಿ 4-0ಯಿಂದ ಸರಣಿ ಗೆಲ್ಲುವ ಸವಾಲು ಕೂಡ ಭಾರತದ ಮುಂದಿದೆ. ಕಿವೀಸ್ ವಿರುದ್ಧದ 0-3 ವೈಟ್ವಾಷ್ ಹಿನ್ನಡೆಯ ನಡುವೆ ಈ ಸವಾಲುಗಳನ್ನು ಗೆದ್ದುಬರಬೇಕಾದ ಒತ್ತಡವೂ ಭಾರತದ ಮೇಲಿದೆ.
ಟೀಕೆಗಳನ್ನು ಸ್ವೀಕರಿಸುವೆವು
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಾವು ಕಳಪೆ ನಿರ್ವಹಣೆ ತೋರಿದೆವು. ಅದರ ಬಗ್ಗೆ ಸಮರ್ಥನೆಗಳನ್ನು ನೀಡುವುದಿಲ್ಲ. ಎಲ್ಲ 3 ವಿಭಾಗಗಳಲ್ಲೂ ವಿಲರಾದೆವು. ಹೀಗಾಗಿ ಟೀಕೆಗಳನ್ನು ಎರಡೂ ಕೈಗಳಿಂದ ಸ್ವೀಕರಿಸುವೆವು. ಅದೇ ರೀತಿ ಮುಂದಿನ ಸವಾಲುಗಳತ್ತ ಗಮನಹರಿಸುವೆವು ಮತ್ತು ಪ್ರತಿದಿನ ಸುಧಾರಣೆ ಕಾಣಲು ಪ್ರಯತ್ನಿಸುವೆವು ಎಂದು ಗಂಭೀರ್ ಹೇಳಿದರು.
*ಯಾವುದೇ ಪಿಚ್ನಲ್ಲಿ ಆಡಲು ಸಿದ್ಧ
ಭಾರತ ತಂಡ ಕಿವೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬೆಂಗಳೂರಿನ ವೇಗದ ಬೌಲಿಂಗ್ ಸ್ನೇಹಿ ಮತ್ತು ಪುಣೆ-ಮುಂಬೈನ ಸ್ಪಿನ್ ಸ್ನೇಹಿ ಪಿಚ್ಗಳಲ್ಲೂ ಮುಗ್ಗರಿಸಿತ್ತು. ಆದರೆ ಆಸೀಸ್ ನೆಲದಲ್ಲಿ ಯಾವುದೇ ರೀತಿಯ ಪಿಚ್ ಎದುರಾದರೂ ಭಾರತ ಅತ್ಯುತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದೆ ಎಂದು ಗಂಭೀರ್ ಹೇಳಿದರು. "ಆಸೀಸ್ನಲ್ಲಿ ನಿರ್ಮಾಣವಾಗುವ ಪಿಚ್ಗಳ ಮೇಲೆ ನಾವು ನಿಯಂತ್ರಣ ಹೊಂದಿಲ್ಲ. ಅದು ಅವರ ಆಯ್ಕೆ. ಅವರು ಯಾವುದೇ ರೀತಿಯ ಪಿಚ್ ಸಿದ್ಧಪಡಿಸಿದರೂ, ನಾವು ಅದರಲ್ಲಿ ಆಡಲು ಸಜ್ಜಾಗಿದ್ದೇವೆ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಯಾವುದೇ ತಂಡವನ್ನಾದರೂ ಸೋಲಿಸಬಲ್ಲೆವು' ಎಂದರು.