ಕ್ರೀಡೆ

VIDEO | ಗಲ್ಲಿ ಕ್ರಿಕೆಟ್​ನಲ್ಲಿ ಕನ್ನಡಿಗನ ಫೀಲ್ಡಿಂಗ್​ ನೋಡಿ ಶಹಬ್ಬಾಸ್ ಎಂದ ಸಚಿನ್ ತೆಂಡೂಲ್ಕರ್!

ನವದೆಹಲಿ: ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ವೇಳೆ ಬೆಳಗಾವಿಯ ಕಿರಣ್ ತರಳೇಕರ್ ಎಂಬಾತ ಫೀಲ್ಡಿಂಗ್ ವೇಳೆ ಹಿಡಿದಿರುವ ಕ್ಯಾಚ್​​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಅತ್ಯದ್ಭುತ ಕ್ಯಾಚ್​ನ ವೀಡಿಯೋವನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಟ್ವಿಟ್ ಮಾಡಿ, ಕಿರಣ್ ಅವರ ಫೀಲ್ಡಿಂಗ್​ಗೆ ಶಹಬಾಸ್ ಎಂದಿದ್ದಾರೆ.

ಫೆ. 9 ರಂದು ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೊ ಆವರಣದಲ್ಲಿ ಟೆನಿಸ್‌ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾಟದಲ್ಲಿ ಸಾಯಿರಾಜ್ vs ಎಸ್‌ಆರ್​ಎಸ್ ಹಿಂದೂಸ್ತಾನ್ ನಿಪ್ಪಾಣಿ ತಂಡದ ನಡುವೆ ಪಂದ್ಯ ನಡೆದಿತ್ತು. ಈ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ತಂಡದ ಆಟಗಾರ ಬಾರಿಸಿದ ಬಾಲ್ ಸಿಕ್ಸರ್​ನತ್ತ ಸಾಗುತ್ತದೆ. ಆದರೆ ಬೌಂಡರಿ ಲೈನ್​ನಲ್ಲಿದ್ದ ಕಿರಣ್ ತರಳೇಕರ್ ಹಾರಿ ಕ್ಯಾಚ್ ಹಿಡಿದು, ಬೌಂಡರಿ ಲೈನ್ ದಾಡುತ್ತಿದ್ದಂತೆ ಮತ್ತೆ ಗಾಳಿಯಲ್ಲಿ ಹಾರಿ ಬಾಲ್​ನನ್ನು ಫುಟ್ಬಾಲ್​ನಂತೆ ಗ್ರೌಂಡ್​ನ ಒಳಭಾಗಕ್ಕೆ ಒದೆಯುತ್ತಾರೆ. ಅಷ್ಟರಲ್ಲಿ ಮತ್ತೊಬ್ಬ ಆಟಗಾರ ಒಳಬಂದ ಬಾಲ್​ನ್ನು ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ.

ಈ ವೀಡಿಯೋವನ್ನು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ ‘ಫುಟ್ಬಾಲ್ ಆಡಲು ಗೊತ್ತಿರುವ ವ್ಯಕ್ತಿಯನ್ನು ನೀವು ಕ್ರಿಕೆಟ್‌ಗೆ ಕರೆತಂದರೆ ಹೀಗಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಖ್ಯಾತ ಕ್ರಿಕೆಟ್ ತಾರೆಯರು ಟ್ವೀಟ್ ಮೂಲಕ ಅದ್ಭುತ ಫೀಲ್ಡಿಂಗ್ ಬಗ್ಗೆ ಮಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.spo