ಶ್ರೀನಗರ: ಎರಡೂ ಕೈಗಳಿಲ್ಲದಿದ್ದರೂ ಭುಜ ಮತ್ತು ಕುತ್ತಿಗೆಯ ನಡುವೆ ಬ್ಯಾಟ್ ಹಿಡಿದು ಆಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿರುವ ಕಾಶ್ಮೀರದ ಪ್ಯಾರಾ ಕ್ರಿಕೆಟಿಗ ಆಮೀರ್ ಹೊಸೈನ್ ಅವರನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಮತ್ತು ತನ್ನ ಹಸ್ತಾಕ್ಷರವಿರುವ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪ್ರಪ್ರಥಮ ಬಾರಿಗೆ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿರುವ ಸಚಿನ್, 7ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿರುವ ಅನಂತ್ನಾಗ್ನ ಆಮೀರ್ ಜೀವನೋತ್ಸಾಹ ಮತ್ತು ಕ್ರಿಕೆಟ್ ಪ್ರೀತಿಯನ್ನು ಶ್ಲಾಘಿಸಿದ್ದಾರೆ. ತಮ್ಮ ಭೇಟಿಯ ವಿಡಿಯೋವನ್ನು ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
34 ವರ್ಷದ ಆಮೀರ್ ಬ್ಯಾಟಿಂಗ್ ವಿಡಿಯೋ ಈ ಮುನ್ನ ವೈರಲ್ ಆದಾಗ, ಸಚಿನ್ ಕೂಡ ಅದನ್ನು ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದರು ಮತ್ತು ಮುಂದೊಂದು ದಿನ ಆಮೀರ್ರನ್ನು ಭೇಟಿಯಾಗುವುದಾಗಿಯೂ ಹೇಳಿಕೊಂಡಿದ್ದರು.