ಕ್ರೀಡೆ

560 ಬಡ ಮಕ್ಕಳಿಗೆ ನೆರವಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಎನ್‌ಜಿಒ ಒಂದರ ಜತೆಗೂಡಿ ಬುಡಕಟ್ಟು ಜನಾಂಗದ 560 ಬಡ ಮಕ್ಕಳಿಗೆ ನೆರವಾಗಿದ್ದಾರೆ. ಮಧ್ಯಪ್ರದೇಶದ ಸೆಹೋರಾ ಜಿಲ್ಲೆಯ ಹಳ್ಳಿಗಳಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗಕ್ಕೆ ಸೇವಾ ಕುಟಿರಾಗಳನ್ನು ನಿರ್ಮಿಸಿರುವ ‘ಎನ್‌ಜಿಒ ಪರಿವಾರ್’ ಎಂಬ ಸಂಸ್ಥೆಯೊಂದಿಗೆ ಸಚಿನ್ ತೆಂಡುಲ್ಕರ್ ಕೈಜೋಡಿಸಿದ್ದಾರೆ.

ಸೆವಾನಿಯಾ, ಬೀಲ್‌ಪಟಿ, ಖಾಪ, ನಯಾಪುರ ಮತ್ತು ಜಮುನ್‌ಝೀಲ್ ಊರಿನ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಶಿಕ್ಷಣವನ್ನು ಒದಗಿಸಲು ಸಚಿನ್ ತೆಂಡುಲ್ಕರ್ ಈ ಸಂಸ್ಥೆಗೆ ನೆರವಾಗಿದ್ದಾರೆ.

ಅಪೌಷ್ಟಿಕತೆ ಮತ್ತು ಅನರಕ್ಷತೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶ ಬುಡಕಟ್ಟು ಜನಾಂಗದ ಮಕ್ಕಳಿಗೆ ಸಚಿನ್ ತಮ್ಮ ಸಹಾಯಹಸ್ತವನ್ನು ಚಾಚಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುನಿಸೆಫ್​ನ ಸದ್ಭಾವನಾ ರಾಯಭಾರಿಯಾಗಿರುವ ಸಚಿನ್ ತೆಂಡುಲ್ಕರ್, ಬಡ ಮಕ್ಕಳ ಅಭಿವೃದ್ಧಿಗಾಗಿ ಈ ಹಿಂದೆಯೂ ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಮುಂಬೈ ಆಸ್ಪತ್ರೆಯೊಂದರ ಜತೆಗೆ ಅವರು ಬಡ ಮಕ್ಕಳ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡುವ ಕಾರ್ಯಕ್ಕೂ ಕೈಜೋಡಿಸಿದ್ದರು.