ಕ್ರೀಡೆ

ಮೂರನೇ ದಿನ ಟೀಮ್ ಇಂಡಿಯಾ ಪ್ರತಿಹೋರಾಟ; 2ನೇ ಸರದಿಯಲ್ಲಿ ಭಾರತಕ್ಕೆ ಬಲ ತುಂಬಿದ ಕೊಹ್ಲಿ-ಸರ್ಫ್ರಾಜ್

ಗುರುರಾಜ್ ಬಿ.ಎಸ್. ಬೆಂಗಳೂರು
ಪ್ರವಾಸಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್​ನಲ್ಲಿ ಭಾರಿ ಮುನ್ನಡೆ ಕಂಡರೂ, ಎರಡನೇ ಸರದಿಯಲ್ಲಿ ದಿಟ್ಟ ಪ್ರತಿ ಹೋರಾಟ ಸಂಘಟಿಸಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದೆ. ಬೆಂಗಳೂರು ಮೂಲದ ಯುವ ಆಲ್ರೌಂಡರ್ ರಚಿನ್ ರವೀಂದ್ರ (134 ರನ್, 157 ಎಸೆತ, 13 ಬೌಂಡರಿ, 4 ಸಿಕ್ಸರ್) ಶತಕದಾಟದಿಂದ ನ್ಯೂಜಿಲೆಂಡ್ ತಂಡ 3ನೇ ದಿನದಾಟದಲ್ಲಿ ಮುನ್ನಡೆಯನ್ನು 350ರ ಗಡಿ ದಾಟಿಸಿದರೆ, ಇದಕ್ಕೆ ಉತ್ತರವಾಗಿ ಯುವ ಬ್ಯಾಟರ್ ಸರ್ಫ್ರಾಜ್ ಖಾನ್ (70*ರನ್, 78 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ (70 ರನ್, 108 ಎಸೆತ, 7 ಬೌಂಡರಿ, 3 ಸಿಕ್ಸರ್) ನಡೆಸಿದ ದಿಟ್ಟ ಜತೆಯಾಟದ ಬಲದಿಂದ ಭಾರತ ಪುಟಿದೆದ್ದಿದೆ. ಆದರೂ 4ನೇ ದಿನದಾಟ ರೋಹಿತ್ ಶರ್ಮ ಬಳಗದ ಪಾಲಿಗೆ ನಿರ್ಣಾಯಕವೆನಿಸಿದೆ. ಶನಿವಾರ ಕಿವೀಸ್ ಮುನ್ನಡೆಯನ್ನು ಹಿಮ್ಮೆಟ್ಟಿಸಿ ಕಠಿಣ ಗುರಿ ನೀಡಲು ಭಾರತ ಪ್ರಯತ್ನಿಸಬೇಕಿದೆ. ಟೀಮ್ ಇಂಡಿಯಾ ಮತ್ತೆ ಕುಸಿದರೆ 4ನೇ ದಿನವೇ ಸೋಲು ಕಾಣುವ ಅಪಾಯವೂ ಇದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 3 ವಿಕೆಟ್​ಗೆ 180 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ, ರಚಿನ್ ರವೀಂದ್ರ ಹಾಗೂ ಟಿಮ್ ಸೌಥಿ (65 ರನ್, 73 ಎಸೆತ, 5 ಬೌಂಡರಿ, 4 ಸಿಕ್ಸರ್) ಶತಕದ ಜತೆಯಾದ ನೆರವಿನಿಂದ 91.3 ಓವರ್​ಗಳಲ್ಲಿ 402 ರನ್​ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 356 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮ (52 ರನ್, 63 ಎಸೆತ, 8 ಬೌಂಡರಿ, 1 ಸಿಕ್ಸರ್) ಉತ್ತಮ ಆರಂಭ ಒದಗಿಸಿದರು. ಚಹಾ ವಿರಾಮದ ಬಳಿಕ ವಿರಾಟ್ ಕೊಹ್ಲಿ ಮತ್ತು ಸರ್ಫ್ರಾಜ್ ಖಾನ್ ಜತೆಯಾಟ ಬಲದಿಂದ ದಿನದಂತ್ಯಕ್ಕೆ ಭಾರತ 49 ಓವರ್​ಗಳಲ್ಲಿ 3 ವಿಕೆಟ್​ಗೆ 231 ರನ್​ಗಳಿಸಿರುವ ಭಾರತ, ಇನ್ನೂ 125 ರನ್ ಹಿನ್ನಡೆಯಲ್ಲಿದೆ. ಕ್ರೀಸ್ ಕಚ್ಚಿ ನಿಂತಿದ್ದ ವಿರಾಟ್ ಕೊಹ್ಲಿ ದಿನದ ಕೊನೇ ಎಸೆತದಲ್ಲಿ ಗ್ಲೆನ್ ಫಿಲಿಪ್ಸ್​ಗೆ ವಿಕೆಟ್ ಒಪ್ಪಿಸಿದ್ದು, ಟೀಮ್ ಇಂಡಿಯಾಗೆ ಹಿನ್ನಡೆ ಎನಿಸಿದೆ. ಸರ್ಫ್ರಾಜ್ ಖಾನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಪಂದ್ಯದಲ್ಲಿ ಇನ್ನೂ 2 ದಿನ ಬಾಕಿಯಿದೆ. ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ಒಂದೂ ಎಸೆತವಿಲ್ಲದೆ ರದ್ದುಗೊಂಡಿತ್ತು.

ಕೊಹ್ಲಿ-ಸರ್ಫ್ರಾಜ್ ಸೂಪರ್ ಆಟ: ಎರಡೂವರೆ ದಿನದಾಟ ಬಾಕಿಯಿರುವಂತೆಯೇ ಎರಡನೇ ಸರದಿ ಆರಂಭಿಸಿದ ಭಾರತಕ್ಕೆ ರೋಹಿತ್-ಜೈಸ್ವಾಲ್ ಮೊದಲ ವಿಕೆಟ್​ಗೆ 104 ಎಸೆತಗಳಲ್ಲಿ 72 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿದರು. ಆದರೆ ಆಗ ಇವರಿಬ್ಬರೂ ಸ್ಪಿನ್ನರ್ ಎಜಾಜ್ ಪಟೇಲ್​ಗೆ ವಿಕೆಟ್ ಒಪ್ಪಿಸಿದರು. ಉತ್ತಮ ಲಯದಲ್ಲಿದ್ದ ಜೈಸ್ವಾಲ್, ಮುನ್ನುಗ್ಗಿ ಬಾರಿಸಲು ಯತ್ನಿಸಿ ಸ್ಟಂಪ್​ಔಟ್ ಆದರೆ, ರೋಹಿತ್ ರಕ್ಷಣಾತ್ಮಕವಾಗಿ ಆಡಿದಾಗ ಹಿಂದೆ ಉರುಳಿ ಹೋದ ಚೆಂಡು ವಿಕೆಟ್​ಗೆ ತಗುಲಿ ಬೌಲ್ಡಾದರು. ಇದರಿಂದ ಕ್ರೀಡಾಂಗಣದಲ್ಲಿ ಒಂದು ಕ್ಷಣ ಮೌನ ಆವರಿಸಿತು. ಆಗ ಭಾರತ ಇನ್ನೂ 261 ರನ್ ಹಿನ್ನಡೆಯಲ್ಲಿತ್ತು. ನಂತರ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಕೊಹ್ಲಿಗೆ ಸರ್ಫ್ರಾಜ್ ಸಮರ್ಥ ಬೆಂಬಲ ಒದಗಿಸಿದರು. ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ನಿರಾಸೆ ಮೂಡಿಸಿದ್ದ ಕೊಹ್ಲಿ, ನೆಚ್ಚಿನ ಮೈದಾನದಲ್ಲಿ ಬೇಗನೆ ಲಯ ಕಂಡುಕೊಂಡರು. ಆಕರ್ಷಕ ಕವರ್ ಡ್ರೖೆವ್, ಸಿಕ್ಸರ್ ಬಾರಿಸಿದ ಕೊಹ್ಲಿ ನೆರೆದಿದ್ದ ಅಭಿಮಾನಿಗಳಿಗೆ ಜೋಶ್ ತುಂಬಿದರು. ಆರಂಭದಿಂದಲೂ ಬಿರುಸಿನಾಟಕ್ಕಿಳಿದ ಸರ್ಫ್ರಾಜ್​ಗೆ ಮತ್ತೊಂದು ತುದಿಯಲ್ಲಿ ನಿಂತು ಕೊಹ್ಲಿ ಬಲ ತುಂಬಿದರು. ಇವರಿಬ್ಬರು ಮೂರನೇ ವಿಕೆಟ್​ಗೆ 163 ಎಸೆತಗಳಲ್ಲಿ 136 ರನ್ ಪೇರಿಸಿ ಕಿವೀಸ್​ಗೆ ತಿರುಗೇಟು ನೀಡಿದರು. ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 31ನೇ ಅರ್ಧಶತಕ ಸಿಡಿಸಿದರೆ, ಸರ್ಫ್ರಾಜ್ ಖಾನ್ 4ನೇ ಅರ್ಧಶತಕದೊಂದಿಗೆ ಭರ್ಜರಿ ಫಾಮ್ರ್ ಮುಂದುವರಿಸಿದರು. ಕೊಹ್ಲಿ-ಸರ್ಫ್ರಾಜ್ ಜೋಡಿ ಪ್ರತಿ ಓವರ್​ಗೆ 5ರ ಸರಾಸರಿಯಲ್ಲಿ ರನ್ ಸೇರಿಸಿದರು. ದಿನದ ಕೊನೇ ಒಂದು ಗಂಟೆಯಲ್ಲಿ ಪಿಚ್ ನಿಧಾನವಾಗಿ ಸ್ಪಿನ್ನರ್​ಗಳಿಗೆ ನೆರವು ಒದಗಿಸಿತು. ಲೋ ಬೌನ್ಸ್ ಎಸೆತಗಳ ಎದುರು ಕೊಹ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದರು. 53 ರನ್ ಗಳಿಸಿದಾಗ ಟೆಸ್ಟ್​ನಲ್ಲಿ 9 ಸಾವಿರ ರನ್ ಪೂರೈಸಿದ ಕೊಹ್ಲಿ, ಟಿ20 ವಿಶ್ವಕಪ್ ಬಳಿಕ ಮೊದಲ 50 ಪ್ಲಸ್ ರನ್ ಸಿಡಿಸಿದರು.

ರಚಿನ್ ಶತಕ, ಸೌಥಿ ಸಾಥ್: ಬೆಳಗ್ಗೆ 22 ರನ್​ಗಳಿಂದ ಆಟ ಆರಂಭಿಸಿದ ರಚಿನ್, ದಿನದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಡೆರಿಲ್ ಮಿಚೆಲ್ (18) ದಿನದ 5ನೇ ಓವರ್​ನಲ್ಲಿ ಔಟಾದರು. ಬೆನ್ನಲ್ಲೇ ಟಾಮ್ ಬ್ಲಂಡೆಲ್ (5), ಗ್ಲೆನ್ ಫಿಲಿಪ್ಸ್ (14), ಮ್ಯಾಟ್ ಹೆನ್ರಿ (5) ವಿಕೆಟ್ ಕಬಳಿಸಿದ ಭಾರತೀಯ ಬೌಲರ್​ಗಳು ತಿರುಗೇಟು ನೀಡಲು ಯತ್ನಿಸಿದರು. ಆದರೆ, ಆಗ ಜತೆಯಾದ ರಚಿನ್ ಹಾಗೂ ಮಾಜಿ ನಾಯಕ ಟಿಮ್ ಸೌಥಿ ಭಾರತೀಯ ಬೌಲರ್​ಗಳಿಗೆ ಸವಾಲೊಡ್ಡಿದರು. ಸ್ಪಿನ್ನರ್ ಹಾಗೂ ವೇಗಿಗಳ ಎದುರು ದಿಟ್ಟ ಬ್ಯಾಟಿಂಗ್ ನಡೆಸಿ ರಚಿನ್ ಮಿಂಚಿದರು. ಇವರಿಬ್ಬರು 8ನೇ ವಿಕೆಟ್​ಗೆ ಪ್ರತಿ ಓವರ್​ಗೆ 6.27ರ ಸರಾಸರಿಯಂತೆ 132 ಎಸೆತಗಳಲ್ಲಿ 137 ರನ್ ಕಸಿದರು. ರಚಿನ್ ತಾನೆದುರಿಸಿದ 124ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಶತಕದ ಸಂಭ್ರಮ ಕಂಡರು. ಭೋಜನಾ ವಿರಾಮದ ನಂತರ ಈ ಜೋಡಿಯನ್ನು ಸಿರಾಜ್ ಬೇರ್ಪಡಿಸಿದರು. ರಚಿನ್ ಔಟ್ ಆಗುವುದರೊಂದಿಗೆ ಕಿವೀಸ್ ಮೊದಲ ಇನಿಂಗ್ಸ್ ಮುಗಿಸಿತು.

3ನೇ ದಿನ 453 ರನ್, 10 ವಿಕೆಟ್!: ಶನಿವಾರ ಉಭಯ ತಂಡಗಳಿಂದ ಒಟ್ಟು 453 ರನ್ ಸಿಡಿಯಿತು. ಜತೆಗೆ 10 ವಿಕೆಟ್ ಉರುಳಿದವು. ಇದು ಭಾರತದಲ್ಲಿ ನಡೆದ ಟೆಸ್ಟ್​ನ ದಿನವೊಂದರಲ್ಲಿ ದಾಖಲಾದ 2ನೇ ಗರಿಷ್ಠ ರನ್ ಆಗಿದೆ. 2009ರಲ್ಲಿ ಭಾರತ-ಶ್ರೀಲಂಕಾ ಟೆಸ್ಟ್​ನ 2ನೇ ದಿನ ಒಟ್ಟು 470 ರನ್ ದಾಖಲಾಗಿದ್ದು ಗರಿಷ್ಠವಾಗಿದೆ. ಇತ್ತೀಚೆಗೆ ಭಾರತ-ಬಾಂಗ್ಲಾ ನಡುವಿನ ಕಾನ್ಪುರ ಟೆಸ್ಟ್​ನ 4ನೇ ದಿನ 437 ರನ್ ಹರಿದಿತ್ತು.

ವಿರಾಟ್ ಕೊಹ್ಲಿ 9 ಸಾವಿರ ರನ್: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 9 ಸಾವಿರ ರನ್​ಗಳಿಸಿದ 4ನೇ ಭಾರತೀಯ ಬ್ಯಾಟರ್ ಎನಿಸಿದರು. ತೆಂಡುಲ್ಕರ್ (15,921), ರಾಹುಲ್ ದ್ರಾವಿಡ್ (13,265), ಸುನೀಲ್ ಗಾವಸ್ಕರ್ (10,122) ಮೊದಲ ಮೂವರು ಸಾಧಕರು.