ಕ್ರೀಡೆ

ಬಾಂಗ್ಲಾ ಎದುರು ಚೆನ್ನೈ ಟೆಸ್ಟ್​ ಗೆದ್ದರೆ ವಿಶೇಷ ದಾಖಲೆ ಬರೆಯಲಿದೆ ಟೀಮ್​ ಇಂಡಿಯಾ!

ಚೆನ್ನೈ: ಟೀಮ್​ ಇಂಡಿಯಾ ಸುದೀರ್ಘ ವಿರಾಮದ ಬಳಿಕ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯೊಂದಿಗೆ ಮರಳಿ ಕಣಕ್ಕಿಳಿಯಲಿದೆ. ಬಾಂಗ್ಲಾ ವಿರುದ್ಧ ಗುರುವಾರದಿಂದ ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ ಗೆದ್ದರೆ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ.

ಭಾರತ ತಂಡ ಗೆದ್ದರೆ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಬಾರಿಗೆ ಸೋಲಿಗಿಂತ ಅಧಿಕ ಗೆಲುವು ಕಂಡಂತಾಗುತ್ತದೆ. ಭಾರತ ಇದುವರೆಗೆ ಆಡಿರುವ 579 ಟೆಸ್ಟ್​ಗಳಲ್ಲಿ 178 ಜಯ, 178 ಸೋಲಿನ ಸಮಬಲ ಹೊಂದಿದೆ. ಜತೆಗೆ 222 ಟೆಸ್ಟ್​ ಡ್ರಾಗೊಂಡಿದ್ದು, 1 ಟೆಸ್ಟ್​ ಟೈ ಆಗಿದೆ. ಸದ್ಯ ಆಸ್ಟ್ರೆಲಿಯಾ (414-232), ಇಂಗ್ಲೆಂಡ್​ (397-325), ಪಾಕಿಸ್ತಾನ (148-144) ಮತ್ತು ದಣ ಆಫ್ರಿಕಾ (179-161) ಸೋಲಿಗಿಂತ ಅಧಿಕ ಗೆಲುವು ಕಂಡಿರುವ ತಂಡಗಳಾಗಿವೆ.

ಐಪಿಎಲ್​ ಶುರುವಾದ ನಂತರದಲ್ಲಿ ಟೀಮ್​ ಇಂಡಿಯಾ ಪಡೆದ 2ನೇ ಸುದೀರ್ಘ (43 ದಿನ) ಬಿಡುವು (ಐಪಿಎಲ್​ ಸಮಯ ಹೊರತಾಗಿ) ಇದಾಗಿದೆ. 2012ರಲ್ಲಿ 44 ದಿನ ವಿಶ್ರಾಂತಿ ಪಡೆದಿದ್ದು ಅಗ್ರಸ್ಥಾನದಲ್ಲಿದೆ. ಭಾರತ ತಂಡ ಕಳೆದ ಆಗಸ್ಟ್​ 7ರಂದು ಶ್ರೀಲಂಕಾ ವಿರುದ್ಧ ಕೊನೆಯದಾಗಿ ಏಕದಿನ ಪಂದ್ಯ ಆಡಿತ್ತು.