ಕ್ರೀಡೆ

ಏಷ್ಯಾಕಪ್​ನಲ್ಲಿ ಅಭ್ಯಾಸಕ್ಕೂ ಮಳೆ ಅಡ್ಡಿ; ಒಳಾಂಗಣದಲ್ಲಿ ಪ್ರ್ಯಾಕ್ಟೀಸ್​ ನಡೆಸಿದ ಟೀಮ್​ ಇಂಡಿಯಾ

ಕೊಲಂಬೊ: ವಿಶ್ವಕಪ್​ ಪೂರ್ವಸಿದ್ಧತೆಗೆ ಮಹತ್ವದ ವೇದಿಕೆ ಎನಿಸಿರುವ ಏಷ್ಯಾಕಪ್​ ಏಕದಿನ ಟೂರ್ನಿ ಈಗಾಗಲೆ ಮಳೆಯಿಂದಾಗಿ ಅಡಚಣೆ ಎದುರಿಸಿದೆ. ಶ್ರೀಲಂಕಾದ ಪಲ್ಲೆಕಿಲೆಯಲ್ಲಿ ನಡೆದ ಟೂರ್ನಿಯ ಮೊದಲ ಹಂತದ ಪಂದ್ಯಗಳು ಮಳೆ ಅಡಚಣೆ ಎದುರಿಸಿದವು. ಈ ಪೈಕಿ ಭಾರತ-ಪಾಕ್​ ಪಂದ್ಯ ಫಲಿತಾಂಶ ಕಾಣದೆ ರದ್ದುಗೊಂಡಿತು. ಇದೀಗ ಟೂರ್ನಿಯ 2ನೇ ಹಾಗೂ ನಿರ್ಣಾಯಕ ಸೂಪರ್​-4 ಹಂತದ ಪಂದ್ಯಗಳಿಗೆ ಕೊಲಂಬೊದಲ್ಲಿ ವೇದಿಕೆ ಸಜ್ಜಾಗಿದೆ. ಆದರೆ ಇಲ್ಲಿ ಪಂದ್ಯ ಬಿಡಿ, ಹೊರಾಂಗಣ ಅಭ್ಯಾಸ ನಡೆಸುವುದಕ್ಕೂ ಮಳೆ ಅಡಚಣೆ ಎದುರಾಗಿದೆ. ಪಲ್ಲೆಕಿಲೆಯಿಂದ ಕೊಲಂಬೊಗೆ ತೆರಳಿರುವ ಭಾರತ ತಂಡದ ಆಟಗಾರರು, ಗುರುವಾರ ಇಲ್ಲಿನ ಎನ್​ಸಿಸಿ ಗ್ರೌಂಡ್​ನ ಒಳಾಂಗಣದಲ್ಲಿ ಅಭ್ಯಾಸ ನಡೆಸಿದರು.

ನಾಯಕ ರೋಹಿತ್​ ಶರ್ಮ ಮತ್ತು ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಹೊರತಾಗಿ ಭಾರತ ತಂಡದ ಇತರ ಆಟಗಾರರು ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಬ್ಯಾಟಿಂಗ್​-ಬೌಲಿಂಗ್​ ಅಭ್ಯಾಸ ನಡೆಸಿದರು. ಈ ಪೈಕಿ ಕನ್ನಡಿಗ ಕೆಎಲ್​ ರಾಹುಲ್​ ಏಷ್ಯಾಕಪ್​ ತಂಡದೊಂದಿಗೆ ಮೊದಲ ಬಾರಿಗೆ ನೆಟ್ಸ್​ನಲ್ಲಿ ಅಭ್ಯಾಸಕ್ಕೆ ಹಾಜರಾದರು.

ರಾಹುಲ್​ ಇನ್​, ಶ್ರೇಯಸ್​ ಔಟ್​?

ಭಾರತ ತಂಡ ಸೂಪರ್​-4 ಹಂತದ ಮೊದಲ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಕೆಎಲ್​ ರಾಹುಲ್​ ಫಿಟ್​ ಆಗಿದ್ದಾರೆ. ಇದು ಭಾರತ ತಂಡಕ್ಕೆ ಹೊಸ ತಲೆನೋವು ತಂದಿದೆ. ರಾಹುಲ್​ ಬದಲಿಗೆ ಪಾಕ್​ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಆಡಿದ್ದ ಇಶಾನ್​ ಕಿಶನ್​ ಭರ್ಜರಿ ಬ್ಯಾಟಿಂಗ್​ ನಿರ್ವಹಣೆ ತೋರಿದ್ದರು. ಹೀಗಾಗಿ ರಾಹುಲ್-ಕಿಶನ್​ ನಡುವೆ ಒಬ್ಬರನ್ನು ಆರಿಸುವುದು ಕಷ್ಟವೆನಿಸಿದೆ. ಇದಕ್ಕಾಗಿ ಬದಲಿ ಮಾರ್ಗ ಹುಡುಕಿರುವ ಟೀಮ್​ ಮ್ಯಾನೇಜ್​ಮೆಂಟ್​, ಕಿಶನ್​ರನ್ನು 11ರ ಬಳಗದಲ್ಲೇ ಉಳಿಸಿಕೊಂಡು ಶ್ರೇಯಸ್​ ಅಯ್ಯರ್​ ಬದಲಿಗೆ ಕೆಎಲ್​ ರಾಹುಲ್​ರನ್ನು ಆಡಿಸುವ ಚಿಂತನೆ ನಡೆಸಿದೆ. ಮತ್ತೊಂದೆಡೆ, ಅಪ್ಪನಾದ ಸಂಭ್ರಮದ ಬಳಿಕ ವೇಗಿ ಜಸ್​ಪ್ರೀತ್​ ಬುಮ್ರಾ ಕೂಡ ಮರಳಿ ತಂಡವನ್ನು ಕೂಡಿಕೊಂಡಿದ್ದು, ಅವರಿಗೆ ನೇಪಾಳ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಮೊಹಮದ್​ ಶಮಿ ಮತ್ತು ಶಾರ್ದೂಲ್​ ಠಾಕೂರ್​ ಪೈಕಿ ಯಾರು ಸ್ಥಾನ ಬಿಟ್ಟುಕೊಡಲಿದ್ದಾರೆ ಎಂಬ ಕೌತುಕ ಮೂಡಿದೆ.