ಢಾಕಾ: ಭಾರತ ತಂಡ ವೈಟ್ಬಾಲ್ ಕ್ರಿಕೆಟ್ ಸರಣಿಗಾಗಿ ಮುಂದಿನ ಆಗಸ್ಟ್ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಮೀರ್ಪುರ ಮತ್ತು ಚಟ್ಟೋಗ್ರಾಮ್ನಲ್ಲಿ ಭಾರತ ತಂಡ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದ್ದು, ಸರಣಿಯ ವೇಳಾಪಟ್ಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಂಗಳವಾರ ಪ್ರಕಟಿಸಿದೆ.
ಭಾರತ ತಂಡ ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ದ್ವಿಪಕ್ಷೀಯ ಟಿ20 ಸರಣಿಯೊಂದನ್ನು ಆಡಲಿದೆ. ಜತೆಗೆ 2014ರ ಬಳಿಕ ಮೊದಲ ಬಾರಿಗೆ ವೈಟ್ಬಾಲ್ ಪಂದ್ಯಗಳಿಗಾಗಿ ಮಾತ್ರ ಬಾಂಗ್ಲಾಕ್ಕೆ ತೆರಳಲಿದೆ. ಏಷ್ಯಾಕಪ್ ಟಿ20 ಟೂರ್ನಿಯ ಸಿದ್ಧತೆಗೆ ಈ ಪ್ರವಾಸ ನೆರವಾಗಲಿದೆ.
ಆಗಸ್ಟ್ 17, 20ರಂದು ಮೀರ್ಪುರದಲ್ಲಿ 2 ಏಕದಿನ ಪಂದ್ಯಗಳು ನಡೆದರೆ, ಕೊನೇ ಏಕದಿನ ಪಂದ್ಯ ಆಗಸ್ಟ್ 23ರಂದು ಚಟ್ಟೋಗ್ರಾಮ್ನಲ್ಲಿ ನಡೆಯಲಿದೆ. ಆಗಸ್ಟ್ 26 ರಂದು ಮೊದಲ ಟಿ20 ಪಂದ್ಯವೂ ಚಟ್ಟೋಗ್ರಾಮ್ನಲ್ಲಿ ನಡೆದರೆ, ಆಗಸ್ಟ್ 29 ಮತ್ತು 31ರಂದು ಕೊನೇ 2 ಟಿ20 ಪಂದ್ಯಗಳು ಮೀರ್ಪುರದಲ್ಲಿ ನಡೆಯಲಿವೆ. ಉಭಯ ದೇಶಗಳ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಈ ಸರಣಿ ಆಯೋಜನೆಯಾಗಿರುವುದು ಕುತೂಹಲಕಾರಿ ಎನಿಸಿದೆ.