ಕ್ರೀಡೆ

ಇನ್ಮುಂದೆ ಇದು ಸಾಧ್ಯವಾಗದಿದ್ರೆ ಭಾರತ ತಂಡಕ್ಕೆ ಕಾದಿದೆ ಅಪಾಯ! ಮೊಹಮ್ಮದ್​ ಕೈಫ್ ಕಾಮೆಂಟ್​ ವೈರಲ್​ | Mohammad Kaif

Mohammad Kaif : ಬಾರ್ಡರ್​​ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ಹೀನಾಯ ಸೋಲು ಕಂಡಿದೆ. 1-3 ಅಂತರದಲ್ಲಿ ರೋಹಿತ್​ ಶರ್ಮ ಪಡೆ ಸೋಲುಂಡಿತು. ಇದರ ಪರಿಣಾಮ ಇದೇ ಮೊದಲ ಬಾರಿಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯುಟಿಸಿ) ಫೈನಲ್ ತಲುಪಲು ವಿಫಲವಾಯಿತು. ಇದು ಮೂರನೇ ಡಬ್ಲ್ಯುಟಿಸಿ ಆವೃತ್ತಿಯಾಗಿದ್ದು, ಮೊದಲೆರಡು ಆವೃತ್ತಿಗಳಲ್ಲಿ ಭಾರತ ಫೈನಲ್ ಪಂದ್ಯಗಳಲ್ಲಿ ಸೋತಿದ್ದು ಗೊತ್ತೇ ಇದೆ. ಇದೀಗ ಟೀಮ್​ ಇಂಡಿಯಾ ಫೈನಲ್​ ತಲುಪಲು ಎಡವಿರುವುದರಿಂದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಗಂಭೀರ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಟೀಮ್​ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದರೆ, ಭಾರತೀಯ ಅಭಿಮಾನಿಗಳು ಬಾರ್ಡರ್ ಗವಾಸ್ಕರ್ ಟ್ರೋಫಿ ವೈಫಲ್ಯವನ್ನು ಮರೆತುಬಿಡುತ್ತಾರೆ. ಅಲ್ಲದೆ, ಎಲ್ಲರು ಟೀಮ್​ ಇಂಡಿಯಾಗೆ ಪ್ರಶಂಸೆಯ ಸುರಿಮಳೆಗೈಯಲಿದ್ದಾರೆ. ಆದರೆ, ಭಾರತವು ಇನ್ನು ಮುಂದೆ ಟೆಸ್ಟ್‌ನಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸದೇ ಹೋದರೆ, ಭಾರತವನ್ನು ಸೀಮಿತ ಓವರ್‌ಗಳ ಕ್ರಿಕೆಟ್ ಆಡುವ ತಂಡವಾಗಿ ನೋಡುವ ಅಪಾಯವಿದೆ ಎಂದು ಕೈಫ್​ ಎಚ್ಚರಿಸಿದರು.

ಭಾರತವು ಡಬ್ಲ್ಯುಟಿಸಿ ಪ್ರಶಸ್ತಿಯನ್ನು ಗೆಲ್ಲಲು ಬಯಸಿದರೆ, ಭಾರತೀಯ ಕ್ರಿಕೆಟಿಗರು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಕೈಫ್​ ಸಲಹೆ ನೀಡಿದರು. ಸೀಮಿಂಗ್ ಟ್ರ್ಯಾಕ್, ಸ್ಪಿನ್ ಟ್ರ್ಯಾಕ್​ಗಳಲ್ಲಿ ಹೆಚ್ಚು ಅಭ್ಯಾಸ ಮಾಡಬೇಕು. ದೇಶೀಯವಾಗಿ ಅಭ್ಯಾಸ ಮಾಡದಿದ್ದರೆ, ಯಶಸ್ಸನ್ನು ಸಾಧಿಸುವುದು ತುಂಬಾ ಕಷ್ಟ. ಆಸೀಸ್ ವಿರುದ್ಧದ ಸೋಲು ಎಚ್ಚರಿಕೆಯ ಗಂಟೆಯಾಗಬೇಕು. ಇದು ಕೇವಲ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಪ್ಪಲ್ಲ ಎಂದು ಕೈಫ್​ ಹೇಳಿದರು.

ಪ್ರತಿಯೊಬ್ಬ ಆಟಗಾರನೂ ರಣಜಿ ಟ್ರೋಫಿಯಲ್ಲಿ ಆಡಲು ಪ್ರಯತ್ನಿಸಬೇಕು. ಆದರೆ, ಈಗ ಕೆಲವರು ವಿಶ್ರಾಂತಿಯ ಹೆಸರಿನಲ್ಲಿ ರಣಜಿಯಲ್ಲಿ ಆಡುವ ಆಸಕ್ತಿ ತೋರುತ್ತಿಲ್ಲ. ಅವರು ರಣಜಿಯಲ್ಲೂ ಆಡುವುದಿಲ್ಲ ಮತ್ತು ಅಭ್ಯಾಸವನ್ನು ಮಾಡುವುದಿಲ್ಲ. ಹೀಗಿರುವಾಗ ಅವರಿಂದ ಅತ್ಯುತ್ತಮ ಪ್ರದರ್ಶನ ಹೇಗೆ ಬರುತ್ತದೆ? ಇನ್ನು ಮುಂದೆಯಾದರೂ ಟೆಸ್ಟ್ ಕ್ರಿಕೆಟ್​ನತ್ತ ಹೆಚ್ಚು ಗಮನ ಹರಿಸಬೇಕು ಎಂದು ಕೈಫ್ ಹೇಳಿದ್ದಾರೆ.

ಭಾರತ ಈ ವರ್ಷ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಅಲ್ಲಿಯವರೆಗೆ ಏಕದಿನ ಮತ್ತು ಟಿ20 ಪಂದ್ಯಗಳನ್ನು ಮಾತ್ರ ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನಾಲ್ಕನೇ ಆವೃತ್ತಿಯು ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. (ಏಜೆನ್ಸೀಸ್​)