ಕ್ರೀಡೆ

ಟೀಮ್​​ ಇಂಡಿಯಾಗೆ ಆಗಸ್ಟ್​-ಸೆಪ್ಟೆಂಬರ್​ ಮಧ್ಯದಲ್ಲೇ ವಿಶ್ರಾಂತಿ ಸಿಗುವುದೇಕೆ? ಇಲ್ಲಿದೆ ನೋಡಿ ಅಸಲಿ ಕಾರಣ…

ನವದೆಹಲಿ: ಟೀಮ್​ ಇಂಡಿಯಾಗೆ ಸದ್ಯ ಯಾವುದೇ ಪಂದ್ಯಗಳಿಲ್ಲ. ಹೀಗಾಗಿ ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವರು ರಜೆಯ ಮೋಜಿನಲ್ಲಿ ಬಿಜಿಯಾಗಿದ್ದರೆ. ಇನ್ನು ಕೆಲ ಆಟಗಾರರು ಮನೆಯಲ್ಲೇ ಉಳಿದು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯವರೆಗೂ ಮೆನ್ ಇನ್ ಬ್ಲೂ ವಿಶ್ರಾಂತಿ ಪಡೆಯಲಿದ್ದಾರೆ. ಇನ್ನು ಒಂದು ತಿಂಗಳು ಭಾರತ ತಂಡದ ಪಂದ್ಯಗಳು ಇರುವುದಿಲ್ಲ.

ಸದಾ ಒಂದಿಲ್ಲೊಂದು ಸರಣಿಗಳಲ್ಲಿ ಬಿಜಿಯಾಗಿರುವ ಟೀಮ್​ ಇಂಡಿಯಾ ಕ್ರಿಕೆಟಿಗರು ಪ್ರತಿ ವರ್ಷ ಆಗಸ್ಟ್-ಸೆಪ್ಟೆಂಬರ್ ಮಧ್ಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಈ ಸಮಯದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯು ಆಟಗಾರರಿಗೆ ಪ್ರತಿ ವರ್ಷ ವಿಶ್ರಾಂತಿ ನೀಡುತ್ತದೆ ಎಂದು ಅನೇಕ ಜನರು ಭಾವಿಸಿದ್ದಾರೆ. ಏಕೆಂದರೆ, ನಿರಂತರ ಕ್ರಿಕೆಟ್‌ ಆಡುವ ಮೂಲಕ ದಣಿದಿರುತ್ತಾರೆ ಎಂದು ನಂಬಿದ್ದಾರೆ. ಆದರೆ ಇದರ ಹಿಂದಿನ ಅಸಲಿ ಸತ್ಯ ಬೇರೆಯೇ ಇದೆ.

ಆಗಸ್ಟ್-ಸೆಪ್ಟೆಂಬರ್ ಮಧ್ಯದಲ್ಲಿ ಟೀಮ್​ ಇಂಡಿಯಾ ಪಂದ್ಯಗಳಿಲ್ಲದೆ ಆಟಗಾರರು ವಿಶ್ರಾಂತಿ ಪಡೆಯುವಂತೆ ಸ್ವತಃ ಬಿಸಿಸಿಐ ಪ್ರತಿ ವರ್ಷ ವೇಳಾಪಟ್ಟಿಯನ್ನು ಸಿದ್ಧಪಡಿಸುತ್ತದೆ ಎಂದು ಭಾವಿಸಬೇಡಿ. ಕಳೆದ ಕೆಲವು ವರ್ಷಗಳಿಂದ ಇದೇ ತಿಂಗಳುಗಳಲ್ಲಿ ಪಂದ್ಯಗಳು ನಡೆಸದೇ ಇರುವುದರ ಹಿಂದೆ ಆಡಳಿತ ಮಂಡಳಿಯ ಮುಖಂಡರ ಒಂದು ಪ್ಲಾನ್​ ಸಹ ಇದೆ. ಪ್ರತಿ ವರ್ಷ ಈ ಎರಡು ತಿಂಗಳ ಅವಧಿಯಲ್ಲಿ ಭಾರತ ತಂಡಕ್ಕೆ ಭಾರಿ ಬ್ರೇಕ್ ನೀಡಲು ಬಲವಾದ ಕಾರಣವೊಂದಿದೆ.

ಕಾರಣ ಏನೆಂದರೆ, ಈ ಹಿಂದೆ ಬಿಸಿಸಿಐ ಚಾಂಪಿಯನ್ಸ್ ಲೀಗ್‌ಗಾಗಿ ಈ ಎರಡು ತಿಂಗಳ ನಡುವೆ ಸ್ಲಾಟ್ ಅನ್ನು ನಿಗದಿಪಡಿಸಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳು ಹಾಗೂ ಇತರ ಲೀಗ್‌ಗಳಲ್ಲಿ ಆಡುವ ಅತ್ಯುತ್ತಮ ತಂಡಗಳೊಂದಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿತ್ತು. ಆದರೆ 2008ರಿಂದ 2014ರವರೆಗೆ ನಡೆದ ಚಾಂಪಿಯನ್ಸ್ ಲೀಗ್ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿತ್ತು.

ಚಾಂಪಿಯನ್ಸ್ ಲೀಗ್‌ಗಾಗಿ ಆಗಸ್ಟ್-ಸೆಪ್ಟೆಂಬರ್ ಮಧ್ಯದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯದಂತೆ ಬಿಸಿಸಿಐ ನೋಡಿಕೊಳ್ಳುತ್ತಿತ್ತು. ಪಂದ್ಯಾವಳಿ ಸ್ಥಗಿತಗೊಂಡ ನಂತರವೂ ಅದೇ ಸಂಸ್ಕೃತಿಯನ್ನು ಮುಂದುವರಿಸುತ್ತಿದೆ. ರದ್ದಾದ ಚಾಂಪಿಯನ್ಸ್ ಲೀಗ್ ಬದಲಿಗೆ ಮಿನಿ ಐಪಿಎಲ್ ಆಯೋಜಿಸಲು ಭಾರತೀಯ ಮಂಡಳಿಯ ನಾಯಕರು ನಾಲ್ಕು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್‌ನಲ್ಲಿ ಪ್ಲೇಆಫ್ ತಲುಪಿದ ತಂಡಗಳೊಂದಿಗೆ ಈ ಲೀಗ್ ನಡೆಸಲು ಬಿಸಿಸಿಐ ಯೋಜಿಸುತ್ತಿದೆ ಎನ್ನಲಾಗಿದೆ. ಇದರ ಭಾಗವಾಗಿ ಆಗಸ್ಟ್-ಸೆಪ್ಟೆಂಬರ್​ ಮಧ್ಯದಲ್ಲಿ ಕಾಲಾವಕಾಶ ಇರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಭವಿಷ್ಯದಲ್ಲಿ ಈ ಟೂರ್ನಿ ಸಾಕಾರಗೊಂಡರೆ ಭಾರತ ತಂಡದ ಆಟಗಾರರು ಆಡುವುದರಲ್ಲೇ ನಿರತರಾಗುತ್ತಾರೆ. ಆದರೆ, ಮಿನಿ ಐಪಿಎಲ್‌ನಿಂದಾಗಿ ಆಟಗಾರರ ವೃತ್ತಿಜೀವನಕ್ಕೆ ಅಪಾಯಕಾರಿಗುವ ಸಾಧ್ಯತೆಯೂ ಇದೆ. ಏಕೆಂದರೆ, ಆಟಗಾರರು ವಿಶ್ರಾಂತಿ ಸಮಯವನ್ನು ಕಳೆದುಕೊಳ್ಳುತ್ತಾರೆ. (ಏಜೆನ್ಸೀಸ್​)