ಹರಾರೆ: ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಶುಭಮನ್ ಗಿಲ್ ನೇತೃತ್ವದ ಯುವ ಭಾರತ ಭರ್ಜರಿ ಜಯ ಸಾಧಿಸಿದ್ದು, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಆತಿಥೇಯರನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಭಾರತ ತಂಡವು ನಾಯಕ ಸಿಕಂದರ್ ರಾಜಾ (46 ರನ್, 28 ಎಸೆತ, 2 ಬೌಂಡರಿ, 3 ಸಿಕ್ಸರ್) ಕೆಲಕಾಲ ಬಿರುಸಿನ ಆಟದ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತ್ತು. ಭಾರತದ ಪರ ಖಲೀಲ್ ಅಹ್ಮದ್ (4-0-32-2), ತುಷಾರ್ ದೇಶ್ಪಾಂಡೆ (3-0-30-1), ರವಿ ಬಿಷ್ಣೋಯಿ (4-0-22-0), ವಾಷಿಂಗ್ಟನ್ ಸುಂದರ್ (4-0-32-1), ಅಭಿಷೇಕ್ ಶರ್ಮಾ (3-0-20-1), ಶಿವಂ ದುಬೆ (2-0-11-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
153 ರನ್ಗಳ ಗುರಿ ಬೆನತ್ತಿದ್ದ ಭಾರತ ತಂಡವು ಆರಂಭಿಕರಾದ ಯಶಸ್ವಿ ಜೈಸ್ವಾಲ್ (93 ರನ್, 53 ಎಸೆತ, 13 ಬೌಂಡರಿ, 2 ಸಿಕ್ಸರ್), ನಾಯಕ ಶುಭಮನ್ ಗಿಲ್ (58 ರನ್, 39 ಎಸೆತ, 6 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಗುರಿಯನ್ನು ವಿಕೆಟ್ ನಷ್ಟವಿಲ್ಲದೆ 15.2 ಓವರ್ಗಳಲ್ಲಿ ಬೆನ್ನಟ್ಟುವ ಮೂಲಕ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ.