ಕ್ರೀಡೆ

ವಿಶ್ವಕಪ್​ನಲ್ಲಿ ಅಚ್ಚರಿಯ ಫಲಿತಾಂಶಗಳ ನಡುವೆ ಭಾರತಕ್ಕೆ ನೆನಪಿರಲಿ 2007ರ ಆಘಾತ!

ಪುಣೆ: ಹ್ಯಾಟ್ರಿಕ್​ ಗೆಲುವಿನೊಂದಿಗೆ ಬೀಗುತ್ತಿರುವ ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್​ನಲ್ಲಿ ತನ್ನ ಗೆಲುವಿನ ಓಟವನ್ನು ಸತತ 4ನೇ ಪಂದ್ಯಕ್ಕೂ ವಿಸ್ತರಿಸಲು ಸಜ್ಜಾಗಿದೆ. ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ರೋಹಿತ್​ ಶರ್ಮ ಬಳಗ, ಬಾಂಗ್ಲಾದೇಶದ ಸವಾಲು ಎದುರಿಸಲಿದ್ದು, ಬಲಿಷ್ಠ ನಿರ್ವಹಣೆಯನ್ನು ಮುಂದುವರಿಸುವ ಹಂಬಲದಲ್ಲಿದೆ. ಆದರೆ ಭಾರತ ಇದೇ ವೇಳೆ 2007ರಲ್ಲಿ ಬಾಂಗ್ಲಾ ಎದುರು ಅನುಭವಿಸಿದ ಸೋಲಿನಿಂದಾಗಿ ಎಚ್ಚರಿಕೆಯಿಂದ ಕಣಕ್ಕಿಳಿಯಬೇಕಾಗಿದೆ.

ವಿಶ್ವಕಪ್​ನಲ್ಲಿ ಈಗಾಗಲೆ 2 ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮಿವೆ. ಇಂಗ್ಲೆಂಡ್​ಗೆ ಆಫ್ಘನ್​ ಮತ್ತು ದಕ್ಷಿಣ ಆಫ್ರಿಕಾಕ್ಕೆ ನೆದರ್ಲೆಂಡ್​ ಆಘಾತ ನೀಡಿವೆ. ಹೀಗಾಗಿ ಭಾರತ ತಂಡ ಈ ಬಾರಿ ಬಾಂಗ್ಲಾದೇಶ ವಿರುದ್ಧ ಎಚ್ಚರಿಕೆಯಿಂದ ಕಣಕ್ಕಿಳಿಯುವುದು ಅಗತ್ಯವಾಗಿದೆ. 2007ರಲ್ಲಿ ಉಭಯ ತಂಡಗಳ ನಡುವೆ ನಡೆದ ಮೊದಲ ವಿಶ್ವಕಪ್​ ಮುಖಾಮುಖಿಯಲ್ಲಿ ಭಾರತ ಆಘಾತ ಎದುರಿಸಿದ್ದು ಮಾತ್ರವಲ್ಲದೆ, ಆ ಸೋಲಿನ ಏಟಿನಿಂದಾಗಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಹೀಗಾಗಿ ಯಾವುದೇ ಕಾರಣಕ್ಕೂ ಭಾರತ, ಬಾಂಗ್ಲಾವನ್ನು ಲುವಾಗಿ ಪರಿಗಣಿಸುವಂತಿಲ್ಲ. 2011, 2015, 2019ರ ಆವೃತ್ತಿಯಲ್ಲಿ ಭಾರತ ಇದೇ ಎಚ್ಚರಿಕೆಯಲ್ಲಿ ಬಾಂಗ್ಲಾವನ್ನು ಸುಲಭವಾಗಿಯೇ ಮಣಿಸಿತ್ತು ಎಂಬುದು ಗಮನಾರ್ಹ.

ಭಾರತ ತಂಡ ಇತ್ತೀಚೆಗೆ ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಮೀಸಲು ಆಟಗಾರರನ್ನು ಕಣಕ್ಕಿಳಿಸಿದಾಗ ಸೋಲು ಅನುಭವಿಸಿತ್ತು. ಹೀಗಾಗಿ ಭಾರತ ಈ ಬಾರಿ ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸದೆ ಗೆಲುವಿನ ಲಯ ಮುಂದುವರಿಸುವತ್ತ ಗಮನಹರಿಸಲಿದೆ. 2022ರ ಡಿಸೆಂಬರ್​ನಲ್ಲಿ ಆಡಿದ ದ್ವಿಪಕ್ಷೀಯ ಏಕದಿನ ಸರಣಿಯಲ್ಲೂ ಭಾರತ 2 ಪಂದ್ಯಗಳಲ್ಲಿ ಬಾಂಗ್ಲಾಗೆ ಮಣಿದಿತ್ತು. ಇದರಿಂದ ಬಾಂಗ್ಲಾ ವಿರುದ್ಧದ ಕೊನೇ 4 ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಹಿನ್ನಡೆ ಭಾರತ ತಂಡದ್ದಾಗಿದೆ. ಇದಕ್ಕೀಗ ದಿಟ್ಟ ತಿರುಗೇಟು ನೀಡುವ ಸಮಯ ಭಾರತ ತಂಡದ್ದಾಗಿದೆ.