ಕ್ರೀಡೆ

2021ರಲ್ಲಿ ಟೀಮ್ ಇಂಡಿಯಾಗೆ ಬಿಡುವಿಲ್ಲ! ನಿರಂತರ ಕ್ರಿಕೆಟ್ ಸರಣಿ

ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಭಾರತ ತಂಡದ ಆಟಗಾರರು ಹಾಲಿ ವರ್ಷ ಸುಮಾರು 6 ತಿಂಗಳ ಕಾಲ ಬಿಡುವು ಪಡೆದಿದ್ದರು. 2021ರ ಕ್ರಿಕೆಟ್ ಕ್ಯಾಲೆಂಡರ್ ಗಮನಿಸಿದಾಗ ಭಾರತ ತಂಡ ಮುಂದಿನ 1 ವರ್ಷ ಕಾಲ ಬಿಡುವಿಲ್ಲದೆ ಪಂದ್ಯಗಳನ್ನು ಆಡಲಿದೆ.

ಆಸ್ಟ್ರೇಲಿಯಾ ಪ್ರವಾಸದ ಬಳಿಕ 2021ರಲ್ಲಿ ಭಾರತ ತಂಡ ಒಟ್ಟು 14 ಟೆಸ್ಟ್, 16 ಏಕದಿನ ಮತ್ತು 23 ಟಿ20 ಪಂದ್ಯಗಳನ್ನು ಆಡಲಿದೆ. ದ್ವಿಪಕ್ಷೀಯ ಸರಣಿಯ ಈ ಪಂದ್ಯಗಳಲ್ಲದೆ, ಐಪಿಎಲ್, ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಟೂರ್ನಿಗಳಲ್ಲೂ ಭಾರತ ತಂಡದ ಆಟಗಾರರು ಆಡಬೇಕಾಗಿದೆ.

ಐಸಿಸಿಯ ಫ್ಯೂಚರ್ಸ್‌ ಟೂರ್ ಪ್ರೋಗ್ರಾಂ (ಎಫ್​ಟಿಪಿ) ಅನ್ವಯ ಭಾರತ ತಂಡ ಈ ಸರಣಿಗಳನ್ನು ಆಡಬೇಕಾಗಿದೆ. ಆದರೆ ಈಗ ಸಾಕಷ್ಟು ಪ್ರತಿಭಾನ್ವಿತ ಆಟಗಾರರು ಲಭ್ಯವಿರುವುದರಿಂದ ಆಟಗಾರರಿಗೆ ಸಾಕಷ್ಟು ಪ್ರಮಾಣದ ಬಿಡುವು ನೀಡಿ, ಆವರ್ತನ ಪದ್ಧತಿಯ ಅನ್ವಯ ಕಣಕ್ಕಿಳಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021ರಲ್ಲಿ ಭಾರತ: ಜನವರಿ-ಮಾರ್ಚ್: ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 4 ಟೆಸ್ಟ್, 4 ಏಕದಿನ, 4 ಟಿ20; ಏಪ್ರಿಲ್-ಮೇ: ಐಪಿಎಲ್-14; ಜೂನ್: ಶ್ರೀಲಂಕಾ ಪ್ರವಾಸ: 3 ಏಕದಿನ, 5 ಟಿ20; ಜೂನ್-ಜುಲೈ: ಶ್ರೀಲಂಕಾದಲ್ಲೇ ಏಷ್ಯಾಕಪ್ ಟಿ20 ಟೂರ್ನಿ; ಜುಲೈ: ಜಿಂಬಾಬ್ವೆ ಪ್ರವಾಸ: 3 ಏಕದಿನ; ಆಗಸ್ಟ್-ಸೆಪ್ಟೆಂಬರ್: ಇಂಗ್ಲೆಂಡ್ ಪ್ರವಾಸದಲ್ಲಿ 5 ಟೆಸ್ಟ್; ಅಕ್ಟೋಬರ್: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ 3 ಏಕದಿನ, 5 ಟಿ20; ಅಕ್ಟೋಬರ್-ನವೆಂಬರ್: ತವರಿನಲ್ಲಿ ಟಿ20 ವಿಶ್ವಕಪ್; ನವೆಂಬರ್-ಡಿಸೆಂಬರ್: ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 2 ಟೆಸ್ಟ್, 3 ಟಿ20; ಡಿಸೆಂಬರ್: ದಕ್ಷಿಣ ಆಫ್ರಿಕಾ ಪ್ರವಾಸ: 3 ಟೆಸ್ಟ್, 3 ಟಿ20.