ಕ್ರೀಡೆ

ರಣಜಿಯಲ್ಲಿ ತನ್ಮಯ್​ ಅಗರ್ವಾಲ್​ ಅತಿವೇಗದ ತ್ರಿಶತಕದ ವಿಶ್ವದಾಖಲೆ; ಸಿಕ್ಸರ್​ಗಳ ಸುರಿಮಳೆ!

ಹೈದರಾಬಾದ್: ಹೈದರಾಬಾದ್​ ಆರಂಭಿಕ ತನ್ಮಯ್​ ಅಗರ್ವಾಲ್​ (323*ರನ್​, 160 ಎಸೆತ, 33 ಬೌಂಡರಿ, 21 ಸಿಕ್ಸರ್​) ರಣಜಿ ಟ್ರೋಫಿಯಲ್ಲಿ ಅತಿವೇಗದ ತ್ರಿಶತಕದ ವಿಶ್ವದಾಖಲೆ ಬರೆದಿದ್ದಾರೆ.

ಪ್ರವಾಸಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅವರು 147 ಎಸೆತಗಳಲ್ಲೇ ತ್ರಿಶತಕ ಪೂರೈಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ಮಾಕೋರ್ ಮರಾಯಿಸ್​ 2017ರಲ್ಲಿ 191 ಎಸೆತಗಳಲ್ಲಿ ತ್ರಿಶತಕ ಸಿಡಿಸಿದ್ದ ದಾಖಲೆ ಮುರಿದರು.

119 ಎಸೆತಗಳಲ್ಲೇ ದ್ವಿಶತಕ ಪೂರೈಸುವ ಮೂಲಕ ಅವರು 39 ವರ್ಷ ಹಳೆಯ ರವಿಶಾಸ್ತ್ರಿ ಅವರ ಭಾರತೀಯ ದಾಖಲೆಯನ್ನೂ ಮುರಿದರು. ಜತೆಗೆ ರಣಜಿ ಇನಿಂಗ್ಸ್​ ಒಂದರಲ್ಲಿ ಸರ್ವಾಧಿಕ 14 ಸಿಕ್ಸರ್​ ಸಿಡಿಸಿದ್ದ ಇಶಾನ್​ ಕಿಶನ್​ ದಾಖಲೆಯನ್ನೂ ಮುರಿದರು.

ಅರುಣಾಚಲವನ್ನು 172 ರನ್​ಗೆ ನಿಯಂತ್ರಿಸಿದ ಹೈದರಾಬಾದ್​ ಮೊದಲ ದಿನದಂತ್ಯಕ್ಕೆ 48 ಓವರ್​ಗಳಲ್ಲಿ 1 ವಿಕೆಟ್​ಗೆ 529 ರನ್​ ಪೇರಿಸಿದೆ. ತನ್ಮಯ್​ ಮೊದಲ ವಿಕೆಟ್​ಗೆ ನಾಯಕ ರಾಹುಲ್​ ಸಿಂಗ್​ ಗಹಲೌತ್​ (185) ಜತೆ 449 ರನ್​ ಸೇರಿಸಿದರು.