ಕ್ರೀಡೆ

ಟಿ20 ವಿಶ್ವಕಪ್​ ಗೆಲ್ಲದಿದ್ರೂ ಪರವಾಗಿಲ್ಲ ಆದ್ರೆ… ಭಾರತ ಮಹಿಳಾ ತಂಡಕ್ಕೆ ಸಿಕ್ಕ ಬಹುಮುಖ್ಯ ಸಂದೇಶವಿದು

ನವದೆಹಲಿ: ಈ ಬಾರಿ ದುಬೈನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್​ಗೆ (ICC Womens T20 WorldCup) ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದೇ ಅಕ್ಟೋಬರ್​ 03ರಿಂದ ಪ್ರಾರಂಭವಾಗಲಿರುವ ಟೂರ್ನಿಗೆ ಟೀಮ್ ಇಂಡಿಯಾ (Team India) ಸನ್ನದ್ಧವಾಗಿದೆ. ಒಂಬತ್ತನೇ ಆವೃತ್ತಿಯು ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ಶುರುವಾಗಲಿದೆ. ಈ ವರ್ಷ ಮೆನ್​ ಇನ್​​ ಬ್ಲ್ಯೂ ಪಡೆ 2024ರ ಟಿ20 ವಿಶ್ವಕಪ್​ಗೆ ಮುತ್ತಿಟ್ಟಂತೆ​ ವುಮೆನ್ ಇನ್ ಬ್ಲೂ ಕೂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಬಯಕೆ ವ್ಯಕ್ತಪಡಿಸಿದೆ. ನಿಗದಿಪಡಿಸಿದಂತೆ ಈ ಟೂರ್ನಿ ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ, ರಾಜಕೀಯ ಉದ್ವಿಗ್ನತೆಯಿಂದಾಗಿ ಇದೀಗ ಐಸಿಸಿ ಈವೆಂಟ್ ಅನ್ನು ದುಬೈಗೆ ವರ್ಗಾಯಿಸಲಾಗಿದೆ ಎಂಬುದು ಗಮನಾರ್ಹ.

ಕಳೆದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್​​ ಪಂದ್ಯದಲ್ಲಿ ಭಾರತ ಸೋಲನ್ನು ಅನುಭವಿಸಿತು. ಆದ್ರೆ, ಈ ಬಾರಿ ಗೆಲುವಿನ ರುಚಿ ನೋಡಲೇಬೇಕು ಎಂದು ಪಣತೊಟ್ಟು ನಿಂತಿರುವ ಮಹಿಳಾ ಮಣಿಯರು, ತಮ್ಮ ಎದುರಾಳಿಗಳನ್ನು ಬಗ್ಗಬಡಿಯಲು ಕಾಯುತ್ತಿದ್ದಾರೆ. ಟೀಮ್ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿರುವ ಜೆಮಿಮಾ ರಾಡ್ರಿಗಸ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿದೆ. ಇನ್ನು ಟೂರ್ನಿ ಆರಂಭಕ್ಕೂ ಮುನ್ನ ಮಾತನಾಡಿರುವ ರಾಡ್ರಿಗಸ್​, ಅಭಿಮಾನಿಗಳಿಂದ ಹಾಗೂ ನಮ್ಮ ಬಿಲ್ಡಿಂಗ್​ ಸೆಕ್ಯೂರಿಟಿಗಳಿಂದ ನಮ್ಮ ತಂಡಕ್ಕೆ ಬಹುಮುಖ್ಯ ಸಂದೇಶವೊಂದು ಕೇಳಿಬಂದಿದೆ ಎಂದಿದ್ದಾರೆ.

ಅ.06ರಂದು ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯ

ಇನ್ನು ತಮಗೆ ಬಂದ ಸಂದೇಶದ ಕುರಿತು ಮಾತನಾಡಿದ ಜೆಮಿಮಾ, "ಇಡೀ ಜಗತ್ತು ಅಂದು ನಮ್ಮ ಪಂದ್ಯವನ್ನು ವೀಕ್ಷಿಸಲಿದೆ. ನಮ್ಮ ಬಿಲ್ಡಿಂಗ್​ನ ಅಷ್ಟು ಸೆಕ್ಯೂರಿಟಿಗಳು ನನ್ನ ಬಳಿ ಹೇಳಿದ್ದು ಮಾತ್ರ ಒಂದೇ ಮಾತು. ನೀವು ಐಸಿಸಿ ಟಿ20 ವಿಶ್ವಕಪ್ ಗೆಲ್ತಿರೋ, ಬಿಡ್ತಿರೋ ಅದು ನಮಗೆ ಬೇಡ. ಆದ್ರೆ, ಯಾವುದೇ ಕಾರಣಕ್ಕೂ ಪಾಕ್​ ವಿರುದ್ಧ ಸೋಲಬಾರದು ಎಂದು ಒತ್ತಿ ಹೇಳಿದ್ದಾರೆ" ಎಂದರು,(ಏಜೆನ್ಸೀಸ್).