ನ್ಯೂಯಾರ್ಕ್: ಕ್ರಿಕೆಟ್ ಶಿಶು ಅಮೆರಿಕ ಟಿ20 ವಿಶ್ವಕಪ್‌ನಲ್ಲಿ ಇತಿಹಾಸವನ್ನು ಸೃಷ್ಟಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ. ಚುಟುಕು ವಿಶ್ವಕಪ್ ಇತಿಹಾಸದಲ್ಲೇ ಬೃಹತ್ ಸ್ಕೋರ್ ಚೇಸ್ ಮಾಡಿದ ಮೂರನೇ ತಂಡವೆಂಬ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾಗಿದೆ. ಡಲ್ಲಾಸ್‌ನಲ್ಲಿ ಭಾನುವಾರ (ಜೂ.02) ಬೆಳಗ್ಗೆ ಕೆನಡಾ ವಿರುದ್ಧ ನಡೆದ ಪಂದ್ಯದಲ್ಲಿ ಯುಎಸ್ಐ ಐತಿಹಾಸಿಕ ಗೆಲುವು ದಾಖಲಿಸಿತು.
ಕೆನಡಾ ನೀಡಿದ 195 ರನ್‌ಗಳ ಗುರಿಯನ್ನು ಅಮೆರಿಕ 17.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಿಸಿತು. ಆಂಡ್ರಿಸ್ ಗೌಸ್ (65 ರನ್ 46 ಎಸೆತ 7 ಬೌಂಡರಿ ಮತ್ತು 3 ಸಿಕ್ಸರ್) ಮತ್ತು ಆ್ಯರನ್ ಜೋನ್ಸ್ (94 ರನ್ 40 ಎಸೆತ 4 ಬೌಂಟರಿ, 10 ಸಿಕ್ಸರ್) ಅಮೆರಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡಗಳಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. 2016ರ ಮಾರ್ಚ್ ತಿಂಗಳಲ್ಲಿ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 230 ರನ್ ಚೇಸ್ ಮಾಡಿತ್ತು. 2007ರಲ್ಲಿ ಜೋಹನ್ಸ್ಬರ್ಗ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 206 ರನ್‌ಗಳನ್ನು ಚೇಸ್ ಮಾಡಿತ್ತು. ಇದೀಗ ಕೆನಡಾ ವಿರುದ್ಧ 195 ರನ್‌ಗಳ ಗುರಿಯನ್ನು ಅಮೆರಿಕ ಸುಲಭವಾಗಿ ಗುರಿಮುಟ್ಟಿದೆ. ಸದ್ಯ ಈ ದಾಖಲೆ ಟೀಮ್ ಇಂಡಿಯಾದಿಂದಲೂ ಸಾಧ್ಯವಾಗಿಲ್ಲ.
ಪಂದ್ಯದ ವಿಚಾರಕ್ಕೆ ಬರುವುದಾರೆ, ಡಲ್ಲಾಸ್ನ ಗ್ರ್ಯಾಡ್ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನೆಡಾ ನವನೀತ್ ಧಳಿವಾಲ್ (61 ರನ್, 44 ಎಸೆತ, 6 ಬೌಂಡರಿ, 3 ಸಿಕ್ಸರ್), ನಿಕೋಲಸ್ ಕೀರ್ಟಾನ್ (51 ರನ್, 31 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿತ್ತು. ಬೃಹತ್ ಗುರಿ ಬೆನ್ನತ್ತಿದ್ದ ಯುಎಸ್ಎ ತಂಡವು ಆರನ್ ಜೋನ್ಸ್ (94 ರನ್, 40 ಎಸೆತ, 4 ಬೌಂಡರಿ, 10 ಸಿಕ್ಸರ್), ಆ್ಯಂಡ್ರಿಯಿಸ್ ಗೌಸ್ (65 ರನ್, 46 ಎಸೆತ, 7 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ಫಲವಾಗಿ 17.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. (ಏಜೆನ್ಸೀಸ್)