ಕ್ರೀಡೆ

ರೋಹಿತ್​, ಕೊಹ್ಲಿ, ಸೂರ್ಯಕುಮಾರ್​ ಅರ್ಧಶತಕದಾಟ: ನೆದರ್ಲೆಂಡ್​ಗೆ 180 ರನ್​ಗಳ ಗುರಿ ನೀಡಿದ ಭಾರತ

ಸಿಡ್ನಿ: ನಾಯಕ ರೋಹಿತ್​ ಶರ್ಮ (53), ವಿರಾಟ್​ ಕೊಹ್ಲಿ (62*) ಹಾಗೂ ಸೂರ್ಯ ಕುಮಾರ್​ ಯಾದವ್​ (51*) ಅಮೋಘ ಬ್ಯಾಟಿಂಗ್​ ನೆರವಿನಿಂದಾಗಿ ಟೀಮ್​ ಇಂಡಿಯಾ, ಎದುರಾಳಿ ನೆದರ್ಲೆಂಡ್​ ತಂಡಕ್ಕೆ 180 ರನ್​ಗಳ ಬೃಹತ್​​ ಗುರಿಯನ್ನು ನೀಡಿದೆ.

ಇಂದು (ಅ.27) ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ​ ಸೂಪರ್​ 12 ಹಂತದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ ಕೇವಲ 2 ವಿಕೆಟ್​ ನಷ್ಟಕ್ಕೆ 179 ರನ್​ಗಳನ್ನು ಕಲೆಹಾಕುವ ಮೂಲಕ ಎದುರಾಳಿ ನೆದರ್ಲೆಂಡ್​ ತಂಡಕ್ಕೆ 180 ರನ್​ಗಳ ಗುರಿ ನೀಡಿದೆ.

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್​. ರಾಹುಲ್​ ಕೇವಲ 9 ರನ್​ ಕಲೆಹಾಕುವ ಮೂಲಕ ಆರಂಭಿಕ ಆಘಾತ ನೀಡಿದರು. ನಂತರ ನಾಯಕ ರೋಹಿತ್​ ಶರ್ಮ ಜೊತೆಗೂಡಿದ ವಿರಾಟ್​ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ತಂಡದ ಮೊತ್ತ 84 ರನ್​ ಆಗಿದ್ದಾಗ ಕೇವಲ 39 ಎಸೆತಗಳಲ್ಲಿ 53 ರನ್​ ಗಳಿಸಿ ರೋಹಿತ್​ ಔಟಾದರು.

ಇದಾದ ಬಳಿಕ ಕೊಹ್ಲಿ ಜೊತೆಗೂಡಿದ ಸೂರ್ಯಕುಮಾರ್​ ಯಾದವ್​ ಮುರಿಯದ ಜೊತೆಯಾಟವಾಡುವ ಮೂಲಕ ಬೃಹತ್​ ರನ್​ ಕಲೆಹಾಕಿದರು. ಕಳೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಬಿರುಸಿನ ಬ್ಯಾಟಿಂಗ್​ ಮಾಡಿ ಗೆಲುವು ತಂದುಕೊಟ್ಟಿರುವ ಕೊಹ್ಲಿ ಈ ಪಂದ್ಯದಲ್ಲೂ ಅಬ್ಬರಿಸಿ ಬೊಬ್ಬಿರಿದರು. ಕೇವಲ 44 ಎಸೆತಗಳಲ್ಲಿ 3 ಬೌಡಂರಿ ಮತ್ತು ಎರಡು ಸಿಕ್ಸರ್​ ನೆರವಿನಿಂದ 62 ರನ್​ ಕಲೆ ಹಾಕಿದರೆ, ಕೊಹ್ಲಿಗೆ ಸಾಥ್​ ನೀಡಿದ ಸೂರ್ಯಕುಮಾರ್​ ಯಾದವ್​ ಕೇವಲ 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿ, ಅಜೇಯರಾಗಿ ಉಳಿದರು.

ನೆದರ್ಲೆಂಡ್​ ಪರ ಫ್ರೆಡ್​ ಕ್ಲಾಸ್ಸೆನ್​ ಹಾಗೂ ಪಾಲ್ ವ್ಯಾನ್ ಮೀಕೆರೆನ್ ತಲಾ ಒಂದೊಂದು ವಿಕೆಟ್​ ಪಡೆದರು. (ಏಜೆನ್ಸೀಸ್​)