ಬೆಂಗಳೂರು: ಅಂತಿಮ ಘಟ್ಟ ತಲುಪಿರುವ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಲ್ಕು ಕ್ವಾರ್ಟರ್ಫೈನಲ್ ಪಂದ್ಯಗಳು ಬುಧವಾರ ಒಂದೇ ದಿನ ನಡೆಯಲಿವೆ. ಮಧ್ಯಪ್ರದೇಶ ಮತ್ತು ಸೌರಾಷ್ಟ್ರ ನಡುವಿನ ದಿನದ ಮೊದಲ ಕ್ವಾರ್ಟರ್ಫೈನಲ್ ಪಂದ್ಯ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆಯಲಿದೆ. ಬರೋಡ-ಬಂಗಾಳ ನಡುವಿನ 2ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮುಂಬೈ-ವಿದರ್ಭ ನಡುವಿನ 3ನೇ ಪಂದ್ಯ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆದರೆ, ಅಂತಿಮ ಕ್ವಾರ್ಟರ್ಫೈನಲ್ ಪಂದ್ಯ ದೆಹಲಿ-ಉತ್ತರ ಪ್ರದೇಶ ನಡುವೆ ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ.
ಮಧ್ಯಪ್ರದೇಶ, ಬರೋಡ, ದೆಹಲಿ, ವಿದರ್ಭ ಮತ್ತು ಮುಂಬೈ ತಂಡಗಳು ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ನೇರವಾಗಿ ಎಂಟರ ಟ್ಟಕ್ಕೇರಿದ್ದವು. ಸೌರಾಷ್ಟ್ರ 2ನೇ ಸ್ಥಾನ ಪಡೆದರೂ ಅತ್ಯುತ್ತಮ 2ನೇ ಸ್ಥಾನಿಯಾಗಿ ನೇರಅರ್ಹತೆ ಗಳಿಸಿತ್ತು. ಇನ್ನು ಬಂಗಾಳ ಮತ್ತು ಉತ್ತರ ಪ್ರದೇಶ ತಂಡಗಳು ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಆಡಿ ಅರ್ಹತೆ ಗಳಿಸಿವೆ.
ಸ್ಟಾರ್ ಕ್ರಿಕೆಟಿಗರು ಕಣಕ್ಕೆ: ಹಲವು ಸ್ಟಾರ್ ಕ್ರಿಕೆಟಿಗರು ಉದ್ಯಾನನಗರಿಯ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಬರೋಡ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಸಹೋದರರು, ಬಂಗಾಳ ತಂಡದಲ್ಲಿ ಅನುಭವಿ ವೇಗಿ ಮೊಹಮದ್ ಶಮಿ, ಮುಂಬೈನಲ್ಲಿ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್, ಪೃಥ್ವಿ ಷಾ, ಶಾರ್ದೂಲ್ ಠಾಕೂರ್, ಮಧ್ಯಪ್ರದೇಶ ತಂಡದಲ್ಲಿ ವೆಂಕಟೇಶ್ ಅಯ್ಯರ್, ರಜತ್ ಪಾಟೀದಾರ್, ಸೌರಾಷ್ಟ್ರದಲ್ಲಿ ಜೈದೇವ್ ಉನಾದ್ಕತ್, ವಿದರ್ಭದಲ್ಲಿ ಜಿತೇಶ್ ಶರ್ಮ, ಕರುಣ್ ನಾಯರ್, ಉಮೇಶ್ ಯಾದವ್, ದೆಹಲಿಯಲ್ಲಿ ಇಶಾಂತ್ ಶರ್ಮ, ಉತ್ತರ ಪ್ರದೇಶದಲ್ಲಿ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಆಕರ್ಷಣೆ ಎನಿಸಿದ್ದಾರೆ.
*ಇಂದಿನ ಕ್ವಾರ್ಟರ್ಫೈನಲ್ಸ್
ಮಧ್ಯಪ್ರದೇಶ-ಸೌರಾಷ್ಟ್ರ
ಆರಂಭ: ಬೆಳಗ್ಗೆ 9.00
ಬರೋಡ-ಬಂಗಾಳ
ಆರಂಭ: ಬೆಳಗ್ಗೆ 11.00
ಮುಂಬೈ-ವಿದರ್ಭ
ಆರಂಭ: ಮಧ್ಯಾಹ್ನ 1.30
ದೆಹಲಿ-ಉತ್ತರ ಪ್ರದೇಶ
ಆರಂಭ: ಸಂಜೆ 4.30
ನೇರಪ್ರಸಾರ: ಜಿಯೋಸಿನಿಮಾ.
ಉಚಿತ ಪ್ರವೇಶ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾರ್ಟರ್ಫೈನಲ್ ಪಂದ್ಯಗಳನ್ನು ವೀಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಗೇಟ್ ನಂ. 14ರಿಂದ ಪ್ರೇಕ್ಷಕರು ಪ್ರವೇಶಿಸಬಹುದು ಎಂದು ಕೆಎಸ್ಸಿಎ ತಿಳಿಸಿದೆ.