ಕ್ರೀಡೆ

ಪ್ಯಾರಿಸ್ ಒಲಿಂಪಿಕ್ಸ್ 2024: ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಲೆಗೆ ಕಂಚು, ಭಾರತಕ್ಕೆ ಇದು 3ನೇ ಪದಕ

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ​2024ರಲ್ಲಿ ಇಂದು ಶೂಟರ್ ಸ್ವಪ್ನಿಲ್ ಕುಸಾಲೆ ಒಲಿಂಪಿಕ್ಸ್‌ನಲ್ಲಿ 50 ಮೀಟರ್ ರೈಫಲ್ 3ಪಿ ಈವೆಂಟ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ಇತಿಹಾಸವನ್ನು ಬರೆದಿದ್ದಾರೆ. ಕುಸಾಲೆ 451.4 ಅಂಕ ಗಳಿಸಿ ಚೀನಾದ ಯುಕುನ್ ಲಿಯು (ಚಿನ್ನ) ಮತ್ತು ಉಕ್ರೇನ್‌ನ ಸೆರ್ಹಿ ಕುಲಿಶ್ ಅವರನ್ನು ಹಿಂದಿಕ್ಕಿ, ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಇಂದು ಚಟೌರೊಕ್ಸ್‌ನಲ್ಲಿ ನಡೆದ ಪುರುಷರ 50 ಮೀಟರ್​ ರೈಫಲ್​ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿದ ಸ್ವಪ್ನಿಲ್ ಕುಸಾಲೆ, ಅಂತಿಮವಾಗಿ ಕಂಚು ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟರು. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇತಿಹಾಸ ಬರೆದ ಸ್ವಪ್ನಿಲ್​ಗೆ ದೇಶವ್ಯಾಪಿ ಅಭಿನಂದನಗೆಳು ಹರಿದುಬರುತ್ತಿವೆ.

ಮೊನ್ನೆಯಷ್ಟೇ ಪ್ಯಾರಿಸ್​ ಒಲಿಂಪಿಕ್ಸ್​ನ 4ನೇ ದಿನದಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ಡಬಲ್ಸ್​ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್​ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕ ಗೆದ್ದರು. 10 ಮಿಟರ್ ಏರ್​ ಪಿಸ್ತೂಲ್ ಶೂಟಿಂಗ್​ ಮಿಶ್ರ​ ಸ್ಪರ್ಧೆಯಲ್ಲಿ ಸೌತ್​ ಕೊರಿಯಾ ವಿರುದ್ಧ ಗೆದ್ದು ಬೀಗಿದ ಮನು ಭಾಕರ್​ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕಕ್ಕೆ ಮುತ್ತಿಟ್ಟರು.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮನು, ಮಿಶ್ರ ಶೂಟಿಂಗ್​​​ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜತೆಗೂಡಿ ಎರಡನೇ ಪದಕ ಪಡೆದುಕೊಂಡರು. ಇದೀಗ ಪುರುಷರ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವಪ್ನಿಲ್​ ಕಂಚು ಮೆಡಲ್​ ಗೆದ್ದಿದ್ದು, ಈ ಮೂಲಕ ಭಾರತಕ್ಕೆ ಮೂರನೇ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.