ಕ್ರೀಡೆ

ಇಂಗ್ಲೆಂಡ್​ ವಿರುದ್ಧ ನಾವು ಸೋಲಲು ಆತನೊಬ್ಬನೆ ಕಾರಣ! ಸೂರ್ಯಕುಮಾರ್ ಶಾಕಿಂಗ್​ ಹೇಳಿಕೆ | Suryakumar Yadav

Suryakumar Yadav : ಮಂಗಳವಾರ ರಾತ್ರಿ ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತು. 172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 145 ರನ್ ಗಳಿಸಿ, ಆಂಗ್ಲರ ಮುಂದೆ ಶರಣಾಯಿತು.

ಟೀಮ್​ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ (40 ರನ್​ 35 ಎಸೆತ 1 ಬೌಂಡರಿ, 2 ಸಿಕ್ಸರ್​) ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ, ಆಂಗ್ಲರ ಪರ ಜೇಮಿ ಓವರ್ಟನ್ (3/24) ಮತ್ತು ಬ್ರೈಡನ್ ಕಾರ್ಸೆ (2/28) ಅದ್ಭುತವಾಗಿ ಬೌಲಿಂಗ್​ ಪ್ರದರ್ಶನ ನೀಡಿದರು.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು. ಆರಂಭಿಕ ಬೆನ್ ಡಕೆಟ್ (51 ರನ್​ 28 ಎಸೆತ 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರೆ, ಲಿಯಾಮ್​ ಲಿವಿಂಗ್​ಸ್ಟೋನ್​ (43 ರನ್​ 24 ಎಸೆತ, 1 ಬೌಂಡರಿ, 5 ಸಿಕ್ಸರ್​) ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ಮಾಡಿದರು. ಟೀಮ್​ ಇಂಡಿಯಾ ಪರ ವರುಣ್ ಚಕ್ರವರ್ತಿ (5/24) ಅದ್ಭುತ ಪ್ರದರ್ಶನ ನೀಡಿದರು. ಆದರೆ, ಟೀಮ್​ ಇಂಡಿಯಾದ ಬ್ಯಾಟಿಂಗ್​ ವೈಫಲ್ಯದಿಂದ ಸೋಲು ಅನುಭವಿಸಬೇಕಾಯಿತು.

ಸೋಲಿನ ಬಗ್ಗೆ ಮಾತನಾಡಿರುವ ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​, ಭಾರತದ ಸೋಲಿಗೆ ಆದಿಲ್ ರಶೀದ್ ಅವರ ಬೌಲಿಂಗ್​ ಕಾರಣ ಎಂದರು. ಇಬ್ಬನಿ ಪಂದ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸಿದ್ದೆ. ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದಾಗ ನಾವು ಪಂದ್ಯವನ್ನು ಗೆಲ್ಲುತ್ತೇವೆ ಅಂದುಕೊಂಡಿದ್ದೆ. ತಿಲಕ್ ವರ್ಮ ಕೂಡ ಆಕ್ರಮಣಕಾರಿಯಾಗಿ ಆಡಲು ಹೋದರು. ಆದರೆ, ಈ ಗೆಲುವು ಆದಿಲ್ ರಶೀದ್‌ಗೆ ಸಲ್ಲುತ್ತದೆ. ಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರು ಸ್ಟ್ರೈಕ್ ಅನ್ನು ಬದಲಿಸಲು ಸಹ ಬಿಡಲಿಲ್ಲ. ಅದಕ್ಕಾಗಿಯೇ ರಶೀದ್ ವಿಶ್ವದ ಅತ್ಯುತ್ತಮ ಸ್ಪಿನ್ನರ್ ಆಗಿದ್ದಾರೆ ಎಂದು ಸೂರ್ಯಕುಮಾರ್​ ಯಾದವ್​ ಹೊಗಳಿಸಿದ್ದಾರೆ.

ಅಂದಹಾಗೆ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ನ ಸ್ಪಿನ್​ ಮಾಂತ್ರಿಕ ಆದಿಲ್ ರಶೀದ್ ತಮ್ಮ ಬೌಲಿಂಗ್​ ಮೂಲಕ ಜಾದೂ ಮಾಡಿದರು. 4 ಓವರ್‌ಗಳಲ್ಲಿ ಕೇವಲ 15 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಪ್ರಮುಖ ಬ್ಯಾಟ್ಸ್‌ಮನ್ ತಿಲಕ್ ವರ್ಮ (18) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು.

ಇದೇ ಸಂದರ್ಭದಲ್ಲಿ ಭಾರತ ತಂಡದಲ್ಲಿ ಹೆಚ್ಚಿನ ಸ್ಪಿನ್ನರ್‌ಗಳಿಗೆ ಅವಕಾಶ ನೀಡಲು ಕಾರಣ ವಿವರಿಸಿದ ಎಸ್​ಕೆವೈ, ರಾಜ್‌ಕೋಟ್ ಪಿಚ್‌ ಸ್ಪಿನ್​ಗೆ ಉತ್ತಮವಾಗಿದೆ. ಅದರ ಬೆಂಬಲ ಪಡೆಯುವ ಉದ್ದೇಶದಿಂದ ನಾವು ಹೆಚ್ಚಿನ ಸ್ಪಿನ್ನರ್‌ಗಳನ್ನು ತೆಗೆದುಕೊಂಡಿದ್ದೇವೆ. ಬೌಲಿಂಗ್ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ವರುಣ್ ಚಕ್ರವರ್ತಿ ಅವರ ಬೌಲಿಂಗ್ ಸೂಪರ್. ನಾವು ಇನ್ನೂ ಬ್ಯಾಟಿಂಗ್‌ನಲ್ಲಿ ಸುಧಾರಿಸಿಕೊಳ್ಳಬೇಕು. ಈ ಸೋಲಿನಿಂದ ನಾವು ಪಾಠ ಕಲಿಯುತ್ತೇವೆ. ಮುಂದಿನ ಪಂದ್ಯಕ್ಕೆ ನಾವು ಸಿದ್ಧರಾಗುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

ಅಂದಹಾಗೆ ನಾಲ್ಕನೇ ಟಿ20 ಪಂದ್ಯ ಶುಕ್ರವಾರ (ಜ.31) ಪುಣೆಯಲ್ಲಿ ನಡೆಯಲಿದೆ. ಸದ್ಯ ಟೀಮ್​ ಇಂಡಿಯಾ 2-1 ರಿಂದ ಮುನ್ನಡೆ ಕಾಯ್ದುಕೊಂಡಿದೆ. (ಏಜೆನ್ಸೀಸ್​)